ಬೆಂಗಳೂರು: ಮನೆಗಳ ಬೀಗ ಒಡೆದು ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ಶೋಯೆಬ್ ಪಾಷಾ ಬಂಧಿತ ಆರೋಪಿ. ₹ 8 ಲಕ್ಷ ಬೆಳೆ ಬಾಳುವ 101 ಗ್ರಾಂ ತೂಕದ ಚಿನ್ನಾಭರಣ, ಎರಡು ಲ್ಯಾಪ್‌ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಈಗಾಗಲೇ ಮನೆಗಳ್ಳತನ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ಹಾಸನ ಜಿಲ್ಲೆಯ ಅರಸೀಕೆರೆಯಿಂದ ತುಮಕೂರಿನವರೆಗೆ ರೈಲಿನಲ್ಲಿ ಬಂದು, ಅಲ್ಲಿಂದ ನೆಲಮಂಗಲದವರೆಗಿನ ಪ್ರಯಾಣಿಕ್ಕೆ ಬೈಕ್ ಬಳಸುತ್ತಿದ್ದುದು ತನಿಖೆಯಲ್ಲಿ ಗೊತ್ತಾಗಿದೆ. ನೆಲಮಂಗಲದ ಲಾಡ್ಜ್ವೊಂದರಲ್ಲಿ ಕೊಠಡಿ ಬಾಡಿಗೆ ಪಡೆದು ಉಳಿದುಕೊಳ್ಳುತ್ತಿದ್ದ ಪಾಷಾ, ಬೀಗ ಹಾಕಿದ ಮನೆಗಳನ್ನು ಪತ್ತೆ ಮಾಡಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದು, ರಾತ್ರಿ ವೇಳೆ ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿದೆ.
ಕಳವಿನ ಬಳಿಕ ಲಾಡ್ಜ್ಗೆ ವಾಪಸ್ ಆಗಿ ಒಂದು ದಿನ ಆರೋಪಿಯ ವಾಸ್ತವ್ಯ ನೆಲಮಂಗಲದ ಲಾಡ್ಡ್‌ನಲ್ಲೇ ಇರುತ್ತಿತ್ತು. ಮರುದಿನ ಬೈಕ್‌ನಲ್ಲಿ ತುಮಕೂರು ರೈಲು ನಿಲ್ದಾಣದವರೆಗೆ ಹೋಗುತ್ತಿದ್ದ ಪಾಷಾ, ಅಲ್ಲಿಂದ ರೈಲು ಏರಿ ಅರಸೀಕೆರೆ ತಲುಪುತ್ತಿದ್ದುದ್ದನ್ನು ತನಿಖಾ ತಂಡ ಪತ್ತೆಮಾಡಿದೆ. ಪ್ರತಿ ಬಾರಿಯೂ ಇದೇ ಮಾದರಿಯ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಕಳ್ಳತನ ನಡೆದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ದೊರೆಯಿತು. ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ. ಆತನ ಮನೆಯಲ್ಲಿದ್ದ 51 ಗ್ರಾಂ ಚಿನ್ನಾಭರಣ ಹಾಗೂ ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ ಆಭರಣವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.