ADVERTISEMENT

ನಾಗರಿಕತೆ ಮೇಲೆ ದಾಳಿ ನಡೆದಾಗ ಸಿಡಿದೇಳುತ್ತಿದ್ದರು: ದೊರೆಸ್ವಾಮಿ ಅವರಿಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 28 ಮೇ 2021, 21:45 IST
Last Updated 28 ಮೇ 2021, 21:45 IST
ಯೋಗೇಂದ್ರ ಯಾದವ್‌ 
ಯೋಗೇಂದ್ರ ಯಾದವ್‌    

ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಈ ನಾಡು ಕಂಡ ಮಹಾನ್‌ ಚೇತನ. ನಾಗರಿಕತೆ ಹಾಗೂ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಾಗ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದರು. ಯಾರಿಗೆ ಏನೇ ಸಮಸ್ಯೆಯಾದರೂ ಅವರ ಪರ ಧ್ವನಿ ಎತ್ತುತ್ತಿದ್ದರು. ಅವರಂತಹ ವ್ಯಕ್ತಿ ಮತ್ತೆ ಹುಟ್ಟಿಬರುವುದು ಕಷ್ಟ’ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ತಿಳಿಸಿದರು.

‘ಸಂಯುಕ್ತ ಹೋರಾಟ–ಕರ್ನಾಟಕ’ ಆನ್‌ಲೈನ್‌ ಮೂಲಕಶುಕ್ರವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡ ಯೋಗೇಂದ್ರ ಯಾದವ್‌, ‘ದೊರೆಸ್ವಾಮಿ ಅವರನ್ನು ಜೀವನದಲ್ಲಿ ಒಮ್ಮೆ ಭೇಟಿ ಮಾಡುವುದೇ ಅದೃಷ್ಟ. ಅವರನ್ನು ಐದಾರು ಬಾರಿ ಭೇಟಿಯಾಗಿರುವ ನಾನು ನಿಜಕ್ಕೂ ಭಾಗ್ಯವಂತ. ಅವರು ನನ್ನ ಹೆಗಲ ಮೇಲೆ ಕೈಯಿಟ್ಟು ಮಾತನಾಡುತ್ತಿದ್ದಾಗಒಂದು ಬಗೆಯ ಪುಳಕ ಉಂಟಾಗುತ್ತಿತ್ತು. ಅವರ ಹೋರಾಟ ಬ್ರಿಟಿಷರ ವಿರುದ್ಧವಷ್ಟೇ ಸೀಮಿತವಾಗಿರಲಿಲ್ಲ. ಇಳಿ ವಯಸ್ಸಿನಲ್ಲೂ ಅವರು ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಿದ್ದರು.ಅವರಿಗೆ ಅಗಾಧವಾದ ನೆನಪಿನ ಶಕ್ತಿ ಇತ್ತು. ಸಣ್ಣ ಸಣ್ಣ ಘಟನೆಗಳನ್ನೂ ನೆನಪು ಮಾಡಿಕೊಂಡು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದರು’ ಎಂದು ಅವರು ಸ್ಮರಿಸಿದರು.

ADVERTISEMENT

ಹಿರಿಯ ರಂಗಕರ್ಮಿ ಪ್ರಸನ್ನ, ‘ದೊರೆಸ್ವಾಮಿ ಅವರು ಒಂಚೂರು ಅಹಂಕಾರವಿಲ್ಲದೆ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣ ಅವರಲ್ಲಿತ್ತು. ವಯಸ್ಸಿನಲ್ಲಿ ತಮಗಿಂತ ಕಿರಿಯರನ್ನೂ ಸ್ನೇಹಿತರಂತೆ ಕಾಣುತ್ತಿದ್ದರು. ಅವರಿಗೆ ಮನುಕುಲದ ಶತ್ರು ಯಾರು ಎಂಬುದು ಚೆನ್ನಾಗಿ ಗೊತ್ತಿತ್ತು. ಅತಿಯಾದ ಮಡಿವಂತಿಕೆ ಇರಲಿಲ್ಲ’ ಎಂದು ಹೇಳಿದರು.

ಹಿರಿಯ ಕಮ್ಯುನಿಸ್ಟ್‌ ಮುಖಂಡ ಎಚ್‌.ವಿ.ಅನಂತ ಸುಬ್ಬರಾವ್‌, ‘ದೊರೆಸ್ವಾಮಿ ಮತ್ತಷ್ಟು ಕಾಲ ನಮ್ಮ ಜೊತೆ ಇರಬೇಕಿತ್ತು. ಅವರು ಹೋರಾಟ ಜೀವಿಯಾಗಿಯೇ ಇಡೀ ಬದುಕು ಕಳೆದರು. ಹೋರಾಟಗಾರರ ಪಾಲಿನ ಮಹಾನ್‌ ಶಕ್ತಿ ಹಾಗೂ ಸ್ಫೂರ್ತಿಯಾಗಿದ್ದರು’ ಎಂದು ಹೇಳಿದರು.

ಹೋರಾಟಗಾರ ಎಸ್‌.ಆರ್‌.ಹಿರೇಮಠ, ‘ದೊರೆಸ್ವಾಮಿ ಅವರ ಜೊತೆ ಹಲವಾರು ಹೋರಾಟಗಳಲ್ಲಿ ಜೊತೆಯಾಗಿದ್ದು ನನ್ನ ಸೌಭಾಗ್ಯ. ಅವರ ಹೋರಾಟದ ಹಾದಿ ನಮಗೆ ದಾರಿದೀಪವಾಗಲಿ’ ಎಂದರು.

ಹೋರಾಟಗಾರರಾದ ಜಿ.ಸಿ.ಬಯ್ಯಾರೆಡ್ಡಿ, ಸಿರಿಮನೆ ನಾಗರಾಜ್‌, ಬಡಗಲಪುರ ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.