ADVERTISEMENT

ಎದೆಹಾಲು ವಂಚಿತ ಮಕ್ಕಳಿಗೆ ಸಂಜೀವಿನಿ– ಶಿವಾಜಿನಗರ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್

ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್ ನಿರ್ಮಾಣ * ಎರಡನೇ ಕೇಂದ್ರ

ವರುಣ ಹೆಗಡೆ
Published 9 ಜುಲೈ 2023, 22:28 IST
Last Updated 9 ಜುಲೈ 2023, 22:28 IST
ಶಿವಾಜಿನಗರದಲ್ಲಿರುವ ಸರ್ಕಾರಿ ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆ
ಶಿವಾಜಿನಗರದಲ್ಲಿರುವ ಸರ್ಕಾರಿ ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆ   

ಬೆಂಗಳೂರು: ಅಗತ್ಯ ಪ್ರಮಾಣದಲ್ಲಿ ಎದೆಹಾಲು ಸಿಗದ ಹಾಗೂ ಎದೆಹಾಲು ವಂಚಿತ ಮಕ್ಕಳಿಗಾಗಿ ಶಿವಾಜಿನಗರದ ಸರ್ಕಾರಿ ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆಯಲ್ಲಿ ‘ಸಂಜೀವಿನಿ’ ಎದೆಹಾಲು ಬ್ಯಾಂಕ್‌ ನಿರ್ಮಿಸಲಾಗಿದೆ. ಸರ್ಕಾರಿ ವ್ಯವಸ್ಥೆಯಡಿ ಸ್ಥಾಪಿತವಾದ ರಾಜ್ಯದ ಎರಡನೇ ಎದೆಹಾಲು ಬ್ಯಾಂಕ್ ಇದಾಗಿದೆ. 

ಈ ಆಸ್ಪತ್ರೆಯು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಎಸ್‌ಎಬಿವಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ ಕಳೆದ ವರ್ಷ ‘ಅಮೃತಧಾರೆ’ ಎದೆಹಾಲು ಬ್ಯಾಂಕ್‌ಗೆ ಚಾಲನೆ ನೀಡಲಾಗಿತ್ತು. ಇದು ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣವಾದ ರಾಜ್ಯದ ಪ್ರಥಮ ಎದೆಹಾಲು ಬ್ಯಾಂಕ್ ಎಂಬ ಹಿರಿಮೆಗೆ ಭಾಜನವಾಗಿತ್ತು. ಈ ಬ್ಯಾಂಕಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ರೋಟರಿ ಡಿಸ್ಟ್ರಿಕ್ಟ್ 3190 ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಘೋಷಾ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್ ನಿರ್ಮಿಸಿದೆ. ಈ ಬ್ಯಾಂಕ್ ನಿರ್ಮಾಣಕ್ಕೆ ₹ 24 ಲಕ್ಷ ವೆಚ್ಚ ಮಾಡಲಾಗಿದೆ. ಇದರ ನಿರ್ವಹಣೆಗಾಗಿ ಆಸ್ಪತ್ರೆ ಸಿಬ್ಬಂದಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ತರಬೇತಿ ನೀಡಲಾಗಿದೆ. ಇದೇ ಸೋಮವಾರದಿಂದ ಸೇವೆ ಪ್ರಾರಂಭಿಸಲು ಆಸ್ಪತ್ರೆ ಸಿದ್ಧತೆ ಮಾಡಿಕೊಂಡಿದೆ.

ADVERTISEMENT

ದಾನಿಗಳಿಂದ ಸಂಗ್ರಹ: ಘೋಷಾ ಆಸ್ಪತ್ರೆಯು 120 ಹಾಸಿಗೆ ಹೊಂದಿದ್ದು, ಇದು ತಾಯಿ–ಮಕ್ಕಳ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಹೆರಿಗೆ ಆದವರು ಹಾಗೂ ಸ್ವ ಇಚ್ಛೆಯಿಂದ ಹೊರಗಿನಿಂದ ಬರುವ ತಾಯಂದಿರಿಂದ ಹೆಚ್ಚುವರಿ ಎದೆ ಹಾಲನ್ನು ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗುತ್ತದೆ. ವೈದ್ಯರ ಶಿಫಾರಸು ಹೊಂದಿರುವ ಶಿಶುಗಳಿಗೆ ಮಾತ್ರ ಈ ಎದೆಹಾಲನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲಾಗುತ್ತದೆ. 

‘ನವಜಾತ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಇರುವ ಎದೆಹಾಲಿನಿಂದ ವಂಚಿತರಾಗಿರುವ ಶಿಶುಗಳಿಗೆ ಈ ಬ್ಯಾಂಕ್‌ನಿಂದ ಎದೆಹಾಲು ಪೂರೈಸಲಾಗುತ್ತದೆ. ಎದೆಹಾಲನ್ನು ಪಡೆಯುವಾಗ ಅಗತ್ಯ ಪರೀಕ್ಷೆ ಮಾಡಲಾಗುತ್ತದೆ. ಆರೋಗ್ಯವಂತ ತಾಯಿಯಿಂದ ಮಾತ್ರ ಎದೆಹಾಲನ್ನು ಪಡೆಯಲಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಘೋಷಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಎದೆಹಾಲು ಬ್ಯಾಂಕ್ ಕಾರ್ಯನಿರ್ವಹಣೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದೆ. ಎದೆಹಾಲು ಸಂಗ್ರಹ ಹಾಗೂ ವಿತರಣೆ ಬಗ್ಗೆ ಸಿಬ್ಬಂದಿ ತರಬೇತಿ ಪಡೆದಿದ್ದಾರೆ.

।ಡಾ. ಮನೋಜ್ ಕುಮಾರ್ ಎಚ್.ವಿ. ಎಸ್‌ಎಬಿವಿಎಂಸಿಆರ್‌ಐ ಡೀನ್

ಯಾರಿಗೆಲ್ಲ ಹಾಲು ಪೂರೈಕೆ?

ಅವಧಿ ಪೂರ್ವ ಜನಿಸಿದ ಶಿಶುಗಳು ಅಸ್ವಸ್ಥ ಶಿಶುಗಳು ಅನಾಥ ಶಿಶುಗಳು ಮೃತಪಟ್ಟ ತಾಯಂದಿರ ಶಿಶುಗಳು ರೋಗಗ್ರಸ್ತ ಬಾಣಂತಿಯರ ಶಿಶುಗಳು ಹಾಗೂ ಎದೆಹಾಲು ಉತ್ಪಾದನೆ ಆಗದಿರುವ ತಾಯಂದಿರ ಶಿಶುಗಳಿಗೆ ಈ ಕೇಂದ್ರದಿಂದ ಎದೆಹಾಲನ್ನು ನೀಡಲಾಗುತ್ತದೆ.

‘6 ತಿಂಗಳು ಶೇಖರಣೆ ಸಾಧ್ಯ’

‘ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಹಾಲನ್ನು ಪ್ಯಾಶ್ಚರೀಕರಿಸಿದ ಬಳಿಕ ಪ್ಯಾಕ್‌ ಮಾಡಿ 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಮಗುವಿಗೆ ಕುಡಿಸುವಾಗ ಅದನ್ನು ಸಾಮಾನ್ಯ ಉಷ್ಣಾಂಶಕ್ಕೆ ತರಲಾಗುತ್ತದೆ. ಇದನ್ನು ಆರು ತಿಂಗಳವರೆಗೂ ಶೇಖರಿಸಿಡಲು ಸಾಧ್ಯ. ಖಾಸಗಿ ಎದೆಹಾಲು ಬ್ಯಾಂಕ್‌ಗಳಲ್ಲಿ 150 ಮಿ.ಲೀ. ಹಾಲಿಗೆ ₹6500ರಿಂದ ₹8000 ಪಾವತಿಸಬೇಕಾಗುತ್ತದೆ. ಇಲ್ಲಿ ಎದೆಹಾಲು ಅಗತ್ಯವಿರುವ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ’ ಎಂದು ಘೋಷಾ ಆಸ್ಪತ್ರೆಯ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.