ADVERTISEMENT

ಹೆಬ್ಬಾಳ | ₹100 ಕೋಟಿ ವೆಚ್ಚದಲ್ಲಿ 292 ರಸ್ತೆ ಅಭಿವೃದ್ಧಿ: ಬೈರತಿ ಸುರೇಶ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:33 IST
Last Updated 11 ಫೆಬ್ರುವರಿ 2026, 23:33 IST
ಬೈರತಿ ಸುರೇಶ್
ಬೈರತಿ ಸುರೇಶ್   

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಬಾರಿಗೆ ₹100 ಕೋಟಿಗೂ ಅಧಿಕ ವೆಚ್ಚದಲ್ಲಿ 290ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿ, ಕಾಂಕ್ರಿಟೀಕರಣ, ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದರು.

ಅಶ್ವಥಕಟ್ಟೆ ರಸ್ತೆ, ಆನಂದಗಿರಿಯ ಎಸ್ಎಸ್ಎ ರಸ್ತೆ, ಸುಬ್ರಮಣ್ಯ ಕಾಲೊನಿಯ 3ನೇ ಮುಖ್ಯರಸ್ತೆ, ಅಯ್ಯಪ್ಪ ಬಡಾವಣೆಯ ರಸ್ತೆ, ಏಳು ಮಂದಮ್ಮ ದೇವಾಲಯ ಸಮೀಪದ 7ನೇ ಅಡ್ಡರಸ್ತೆ ಸೇರಿದಂತೆ ವಿವಿಧ ಮುಖ್ಯ ಮತ್ತು ಅಡ್ಡರಸ್ತೆಗಳ ಡಾಂಬರೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಬೈರತಿ ಸುರೇಶ್‌ ಅವರು ಬುಧವಾರ ಭೂಮಿಪೂಜೆ ನೆರವೇರಿಸಿದರು.

‘ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗಿವೆ. ಪ್ರತಿಯೊಬ್ಬ ನಾಗರಿಕರಿಗೂ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಬದ್ಧತೆಯಾಗಿದೆ. ಅದರಂತೆ ನಾನು ಪ್ರತಿನಿಧಿಸುತ್ತಿರುವ ಹೆಬ್ಬಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಒಟ್ಟು 41 ಕಿಲೋ ಮೀಟರ್ ಉದ್ದದ ರಸ್ತೆಗಳ ಕಾಮಗಾರಿ ಇದಾಗಿದ್ದು, ನಾಗರಿಕರಿಗೆ ಹೆಚ್ಚಿನ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಪ್ಯಾಕೇಜ್‌ಗಳನ್ನು ಮಾಡಿ ಎಲ್ಲಾ ಕಡೆ ಏಕಕಾಲಕ್ಕೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.