
ಬೆಂಗಳೂರು: ಎಚ್‌ಎಎಲ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಗಿರಿಜಾ (30) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪದಡಿ ಪತಿ ನವೀನ್‌ಕುಮಾರ್‌ನನ್ನು (32) ಪೊಲೀಸರು ಬಂಧಿಸಿದ್ದಾರೆ.
‘ಅನ್ನಸಂದ್ರಪಾಳ್ಯದಲ್ಲಿ ಗಿರಿಜಾ ಹಾಗೂ ನವೀನ್‌ಕುಮಾರ್ ದಂಪತಿ ವಾಸವಿದ್ದರು. ಮಗು ಮಾಡಿಕೊಳ್ಳುವ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಶುಕ್ರವಾರ ರಾತ್ರಿಯೂ ಜಗಳ ನಡೆದು, ಗಿರಿಜಾ ಕೊಲೆ ಆಗಿದೆ. ಕೃತ್ಯದ ಬಳಿಕ ಪರಾರಿಯಾಗಿದ್ದ ನವೀನ್‌ಕುಮಾರ್‌ನನ್ನು ಕೆಲವೇ ಗಂಟೆಗಳಲ್ಲಿ ಸೆರೆಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಗಿರಿಜಾ ಹಾಗೂ ಪೋಷಕರು, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಯಶವಂತಪುರದಲ್ಲಿ ನೆಲೆಸಿದ್ದರು. ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ನವೀನ್ ಕುಮಾರ್, ನಗರದ ಬೇಕರಿಗಳಿಗೆ ಬ್ರೆಡ್ ವಿತರಣೆ ಕೆಲಸ ಮಾಡುತ್ತಿದ್ದ. ಗಿರಿಜಾ ಹಾಗೂ ನವೀನ್‌ಕುಮಾರ್ ನಡುವೆ ಪರಿಚಯವಾಗಿ, ಸ್ನೇಹ ಏರ್ಪಟ್ಟಿತ್ತು. ಮದುವೆಯಾಗಲು ತೀರ್ಮಾನಿಸಿದ್ದರು. ಎರಡೂ ಕುಟುಂಬದವರು ಮದುವೆಗೆ ಒಪ್ಪಿಗೆ ನೀಡಿದ್ದರು’ ಎಂದು ತಿಳಿಸಿದರು.
‘ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ, ಅನ್ನಸಂದ್ರಪಾಳ್ಯದಲ್ಲಿ ನೆಲೆಸಿದ್ದರು. ಗಿರಿಜಾ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮಗು ಮಾಡಿಕೊಳ್ಳುವ ವಿಚಾರದಲ್ಲಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಇದೇ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.