ADVERTISEMENT

ಅಸಮಾಧಾನಿತರ ಜೊತೆ ಮಾತನಾಡುತ್ತೇನೆ– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 6:25 IST
Last Updated 8 ಆಗಸ್ಟ್ 2021, 6:25 IST
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್‌ ಸಿಂಗ್‌ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ಭಾವನೆಗಳು ಅರ್ಥವಾಗುತ್ತದೆ. ನಿಮ್ಮ ಗೌರವ ಉಳಿಸಿಕೊಡಲು ಏನೇನು ಮಾಡಬೇಕು ಆ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಅವರಿಗೆ ಹೇಳಿದ್ದೇನೆ. ಅವರು ಒಪ್ಪಿಕೊಂಡು ಹೋಗಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಭಾನುವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಖಾತೆ ಹಂಚಿಕೆ ಬಗ್ಗೆ ಅಪಸ್ವರ ಎತ್ತಿರುವ ಎಂಟಿಬಿ ನಾಗರಾಜ್‌ ಅವರನ್ನೂ ಕರೆದು ಮಾತನಾಡುತ್ತೇನೆ’ ಎಂದರು.

ಧೀಮಂತ ನಾಯಕ: ‘ನಿಜಲಿಂಗಪ್ಪ ಅವರು ರಾಜ್ಯ ಕಂಡ ಧೀಮಂತ ನಾಯಕ. ಕರ್ನಾಟಕದ ಏಕೀಕರಣದಲ್ಲಿ ಅವರು ಬಹಳ ದೊಡ್ಡ ಪಾತ್ರ ವಹಿಸಿದ್ದರು. ಅವರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಮಧ್ಯೆ ಸೇತುವೆಯಂತೆ ಇದ್ದರು’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.

ADVERTISEMENT

‘ನೀರಾವರಿ ಕ್ಷೇತ್ರಕ್ಕೆ ನಿಜಲಿಂಗಪ್ಪ ಅವರ ಕೊಡುಗೆ ಮಹತ್ವದ್ದು. ಕಾವೇರಿ, ಕೃಷ್ಣಾ ಯೋಜನೆಯ ಮೊದಲ ಚಿಂತಕರು ಮತ್ತು ರೂವಾರಿ ಅವರು. ಶಿಗ್ಗಾವಿಯಿಂದ ಆರಿಸಿ ಬಂದು ಅವರು ಮುಖ್ಯಮಂತ್ರಿ ಆಗಿದ್ದರು. ಅದೇ ಕ್ಷೇತ್ರವನ್ನು ಪ್ರತಿನಿಧಿಸಿ ಮುಖ್ಯಮಂತ್ರಿಯಾದ ಭಾಗ್ಯ ನನ್ನದು. ಅವರ ಜೀವನ ಆದರ್ಶ, ಉತ್ತಮ ಆಡಳಿತ ಇತರರಿಗೆ ಮಾದರಿ– ಮಾರ್ಗದರ್ಶಕ. ಸಾರ್ವಜನಿಕ ವಲಯದಲ್ಲಿ ಉತ್ತಮ ಸ್ನೇಹ, ಸಂಬಂಧ ಇಟ್ಟುಕೊಂಡಿದ್ದ ಅವರ ನಡೆಯನ್ನು ಪಾಲಿಸುವ ಸಂಕಲ್ಪವನ್ನು ಇಡೀ ಮಂತ್ರಿ ಮಂಡಳ ಮಾಡುವ ಅವಶ್ಯಕತೆ ಇದೆ’ ಎಂದರು.

ನೆಹರು ಪುತ್ಥಳಿ ಪುನರ್‌ ಸ್ಥಾಪನೆ: ವಿಧಾನಸೌಧ ಮುಂಭಾಗದಲ್ಲಿ ಪುನರ್‌ಸ್ಥಾಪಿಸಿರುವ ಪಂಡಿತ್ ಜವಾಹರಲಾಲ್ ನೆಹರು ಪುತ್ಥಳಿಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅನಾವರಣ ಮಾಡಿದರು.

ಮೆಟ್ರೊ ಕಾಮಗಾರಿ ಹಿನ್ನೆಲೆಯಲ್ಲಿ ವಿಧಾನಸೌಧದ ಹಿಂಭಾಗಕ್ಕೆ ಈ ಹಿಂದೆ ಪುತ್ಥಳಿಯನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ವಿಧಾನಸೌಧದ ಮುಂಭಾಗದಲ್ಲಿ ಪುನರ್ ಸ್ಥಾಪಿಸಲಾಗಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕೂಡಾ ಇದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.