ADVERTISEMENT

ಮಕ್ಕಳಲ್ಲಿನ ವಾಕ್-ಶ್ರವಣ ಸಮಸ್ಯೆ ಗುರುತಿಸಿ: ಎಂ. ಪುಷ್ಪಾವತಿ

ಎಸ್‌ಜಿಎಸ್‌ ವಾಗ್ದೇವಿ ಕೇಂದ್ರದಿಂದ 30ನೇ ವಾರ್ಷಿಕೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:41 IST
Last Updated 8 ಫೆಬ್ರುವರಿ 2026, 23:41 IST
ಕಾರ್ಯಕ್ರಮದಲ್ಲಿ ದೊಡ್ಡಗುಡ್ಡಯ್ಯ ಮತ್ತು ಕೆ. ಮಾರುತಿ ಕೃಷ್ಣ ಗೌಡ್ ಅವರಿಗೆ ‘ಡಾ. ಶಾಂತ ರಾಧಾಕೃಷ್ಣ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಎಂ. ಪುಷ್ಪಾವತಿ, ಶಾಂತ ರಾಧಾಕೃಷ್ಣ ಮತ್ತು ಡಿ.ಆರ್. ಅಶೋಕ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ದೊಡ್ಡಗುಡ್ಡಯ್ಯ ಮತ್ತು ಕೆ. ಮಾರುತಿ ಕೃಷ್ಣ ಗೌಡ್ ಅವರಿಗೆ ‘ಡಾ. ಶಾಂತ ರಾಧಾಕೃಷ್ಣ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಎಂ. ಪುಷ್ಪಾವತಿ, ಶಾಂತ ರಾಧಾಕೃಷ್ಣ ಮತ್ತು ಡಿ.ಆರ್. ಅಶೋಕ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಿದುಳು ಸಮರ್ಪಕವಾಗಿ ಅಭಿವೃದ್ಧಿ ಹೊಂದದಿರುವುದೂ ಸೇರಿ ವಿವಿಧ ಕಾರಣಗಳಿಂದ ಮಕ್ಕಳಲ್ಲಿ ವಾಕ್‌–ಶ್ರವಣ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯನ್ನು ಬೇಗ ಗುರುತಿಸಿದಲ್ಲಿ ಯಶಸ್ವಿ ಚಿಕಿತ್ಸೆ ಸಾಧ್ಯವಾಗಲಿದೆ’ ಎಂದು ಮೈಸೂರಿನ ಮಾನಸ ಗಂಗೋತ್ರಿಯ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಎಂ. ಪುಷ್ಪಾವತಿ ಹೇಳಿದರು.

ಎಸ್.ಜಿ.ಎಸ್. ವಾಗ್ದೇವಿ ಕೇಂದ್ರ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 30ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ‘ಮಗು ಜನಿಸಿದ ಬಳಿಕ ಶ್ರವಣ ಪರೀಕ್ಷೆ ಮಾಡಿಸಬೇಕು. ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಪಾಲಕರು ಕಡೆಗಣಿಸಬಾರದು. ಕೇಳಿಸಿಕೊಳ್ಳಲು ಹಾಗೂ ಮಾತನಾಡಲು ಕಷ್ಟಪಡುತ್ತಿರುವ ಮಕ್ಕಳನ್ನು ಸಮೀಪದ ವಾಕ್-ಶ್ರವಣ ಸಂಸ್ಥೆಗೆ ಶಿಫಾರಸು ಮಾಡಬೇಕು. ಇದರಿಂದ ಅವರಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ’ ಎಂದರು. 

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಅಶೋಕ್ ಡಿ.ಆರ್., ‘ಅಂಗವಿಕಲರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಲು ನಾವು ಶ್ರಮಿಸಬೇಕು. ಮಗು ಹುಟ್ಟಿದ ಆರು ತಿಂಗಳಲ್ಲಿ ಶ್ರವಣ ಸಮಸ್ಯೆ ಗುರುತಿಸಿ ಚಿಕಿತ್ಸೆ ಒದಗಿಸಬೇಕು. ವಾಕ್, ಶ್ರವಣ ಥೆರಪಿಯಿಂದ ಮಗು ಸಮಾಜದಲ್ಲಿ ಗೌರವಯುತವಾಗಿ, ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯ’ ಎಂದು ಹೇಳಿದರು.  

ADVERTISEMENT

ವೈದ್ಯ ಸಾಹಿತಿ ಡಾ.ನಾ. ಸೋಮೇಶ್ವರ, ‘ನಾನಾ ಕಾರಣಗಳಿಂದ ಮಕ್ಕಳಲ್ಲಿ ವಾಕ್‌–ಶ್ರವಣ ಸಮಸ್ಯೆ ಕಾಣಿಸಿಕೊಳ್ಳಲಿದೆ. ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆ ಪಡೆಯದೆ ಮಾತ್ರೆಗಳನ್ನು ಸೇವಿಸುವುದರಿಂದ, ಮಗುವಿನ ಶ್ರವಣ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಹೆಚ್ಚು ಔಷಧ ಪಡೆಯಬಾರದು. ಈಗಾಗಲೇ ಒಂದು ಮಗು ವಾಕ್‌–ಶ್ರವಣ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಎರಡನೇ ಮಗು ಪಡೆಯುವ ಮೊದಲು ವೈದ್ಯರ ಸಲಹೆ ‍ಪಡೆಯಬೇಕು. ರಕ್ತ ಸಂಬಂಧದಲ್ಲಿ ವಿವಾಹವಾಗುವುದರಿಂದ ಶ್ರವಣಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ’ ಎಂದರು. 

ಇದೇ ವೇಳೆ ದೊಡ್ಡಗುಡ್ಡಯ್ಯ ಹಾಗೂ ಕೆ. ಮಾರುತಿ ಕೃಷ್ಣ ಗೌಡ್ ಅವರಿಗೆ ‘ಡಾ.ಶಾಂತ ರಾಧಾಕೃಷ್ಣ ದತ್ತಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಮೈಸೂರಿನ ಅವಧೂತ ದತ್ತ ಪೀಠದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್ ಸ್ಥಾಪಕಿ ಡಾ. ಶಾಂತ ರಾಧಾಕೃಷ್ಣ ಉಪಸ್ಥಿತರಿದ್ದರು. ಎಸ್.ಜಿ.ಎಸ್. ವಾಗ್ದೇವಿ ಶಾಲೆಯ ಮಕ್ಕಳು ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.