ADVERTISEMENT

ಸಾಕು ಪ್ರಾಣಿ, ಪಕ್ಷಿ ಸತ್ತರೆ ಮಾಲೀಕರಿಗೆ ಶಿಕ್ಷೆ: ಪ್ರಾಣಿ ಕಲ್ಯಾಣ ಮಂಡಳಿ ಎಚ್ಚರಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 21:11 IST
Last Updated 2 ಏಪ್ರಿಲ್ 2020, 21:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಕೊರೊನಾ ಸೋಂಕು ಹಬ್ಬುವುದನ್ನು ತಡೆಯಲು ಲಾಕ್‌ಡೌನ್‌ ಜಾರಿಗೊಂಡ ಬಳಿಕ ಬೀಡಾಡಿ ದನಗಳು, ಬೀದಿನಾಯಿಗಳು, ಮಾರಾಟ ಮಳಿಗೆಗಳಲ್ಲಿರುವ ಮುದ್ದಿನ ಪ್ರಾಣಿಗಳು ಹಾಗೂ ಪಕ್ಷಿಗಳು ಅಗತ್ಯ ಆರೈಕೆ, ಆಹಾರ, ನೀರು ಇಲ್ಲದೇ ಸಾಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸಾಕು ಪ್ರಾಣಿಗಳು, ಪಕ್ಷಿಗಳು ಅಥವಾ ಜಾನುವಾರುಗಳು ಆರೈಕೆ ಇಲ್ಲದೆ ಸತ್ತರೆ ಅವುಗಳ ಮಾಲೀಕರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ.

1960ರ ಪ್ರಾಣಿ ಹಿಂಸೆ (ತಡೆ) ಕಾಯ್ದೆಯ ಸೆಕ್ಷನ್‌ 11 (1) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 428 ಮತ್ತು 429 ಪ್ರಕಾರ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಯಾವುದೇ ಪ್ರಾಣಿ, ಪಕ್ಷಿ ಮತ್ತು ಜಾನುವಾರುಗಳನ್ನು ಆಹಾರ, ನೀರು,ಆಶ್ರಯ, ಆರೋಗ್ಯ ರಕ್ಷಣೆ ನೀಡದೆ ಕಡೆಗಣಿಸುವ ಹಾಗೂ ಅವುಗಳ ಸಾವಿಗೆ ಕಾರಣರಾಗುವ ಮಾಲೀಕರು ಶಿಕ್ಷೆಗೆ ಅರ್ಹರು ಎಂಬುದನ್ನು ಮಂಡಳಿ ನೆನಪಿಸಿದೆ.

ADVERTISEMENT

‘ಬೀಡಾಡಿ ದನಗಳು, ಬೀದಿನಾಯಿಗಳು ಮತ್ತು ನಿಶ್ಯಕ್ತ ಪ್ರಾಣಿಗಳ ರಕ್ಷಣೆಯು ಸಾರ್ವಜನಿಕರ ಹೊಣೆ. ಕೆಲವು ಮಾಲೀಕರು ತಮ್ಮ ಮುದ್ದು ಪ್ರಾಣಿಗಳನ್ನು (ಪೆಟ್‌ ಅನಿಮಲ್ಸ್‌) ನಿರ್ಲಕ್ಷ್ಯ ಮಾಡಿರುವುದೂ ಕ೦ಡು ಬಂದಿದೆ. ಆದ್ದರಿ೦ದ, ಜಿಲ್ಲಾ ಪ್ರಾಣಿ ದಯಾ ಸಂಘಗಳು ತಮ್ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ ಅವರ ನೆರವಿನೊಂದಿಗೆ ಬಿಡಾಡಿ ದನಗಳು, ಬೀದಿನಾಯಿಗಳು, ಪ್ರಾಣಿ, ಪಕ್ಷಿಗಳು ಹಾಗೂ ಜಾನುವಾರುಗಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಆಹಾರ, ನೀರು, ಆಶ್ರಯ ಒದಗಿಸಿ ಅವುಗಳ ಆರೈಕೆಗೆ ಕ್ರಮಕೈಗೊಳ್ಳಬೇಕು’ ಎಂದು ಮಂಡಳಿ ಮನವಿ ಮಾಡಿದೆ.

‘ಮುದ್ದಿನ ಪ್ರಾಣಿಗಳ ಮಳಿಗೆಗಳ ಮಾಲೀಕರನ್ನು ಸ೦ಪರ್ಕಿಸಿ, ಮಳಿಗೆಗಳಲ್ಲಿರುವಲ್ಲಿರುವ ಪ್ರಾಣಿ ಪಕ್ಷಿಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದೆ.

ಜಾನುವಾರುಗಳಿಗೆ ಸಾಕಷ್ಟು ಮೇವು, ಔಷಧ ಮತ್ತು ನೀರು ನಿರಂತರವಾಗಿ ಲಭ್ಯ ಇರುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಆಗಿರುವ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕರು ಗುರುವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸಂಕಷ್ಟದ ಸಮಯದಲ್ಲಿ ಅನೇಕ ಸರ್ಕಾರೇತರ ಸಂಘ ಸ೦ಸ್ಥೆಗಳು ಇ೦ತಹ ಪ್ರಾಣಿ, ಪಕ್ಷಿ ಹಾಗೂ ಜಾನುವಾರುಗಳ ಸ೦ರಕ್ಷಣಾ ಕಾರ್ಯದಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡಿರುವುದನ್ನು ಮಂಡಳಿ ಶ್ಲಾಘಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.