
ಬೆಂಗಳೂರು: ನಗರದ ಸಿ.ವಿ. ರಾಮನ್ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ (ಐಐಎಸ್‌ಸಿ) ವಿದ್ಯಾರ್ಥಿಗಳಿಗೆ ಮಂಜೂರಾದ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಇಬ್ಬರು ಸಿಬ್ಬಂದಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರ್ಯದರ್ಶಿ ವಿ.ಸೌಂದರ್ಯ ಹಾಗೂ ಸಹಾಯಕಿ ಆರ್.ದೀಪಿಕಾ ಬಂಧಿತರು. ಇಬ್ಬರೂ ಹೊರಗುತ್ತಿಗೆ ಸಂಸ್ಥೆ ವೆಂಕಟೇಶ್ವರ ಎಂಟರ್‌ಪ್ರೈಸಸ್ ಮೂಲಕ ನೇಮಕಗೊಂಡು ಐಐಎಸ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು.
ಸಂಸ್ಥೆಯ ರಿಜಿಸ್ಟ್ರಾರ್ ಶ್ರೀಧರ್ ವಾರಿಯರ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳಾದ 61(2), 314, 316(5), 336(3), 340((2), ಆರ್‌ಡಬ್ಲ್ಯು 3(5) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಕ್ರಮ ಎಸಗಿರುವುದು ಪತ್ತೆ ಆಗಿದೆ. ಬಳಿಕ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ವಿದ್ಯಾರ್ಥಿಗಳ ವಿದೇಶಿ ಪ್ರಯಾಣಕ್ಕಾಗಿ ಪಾವತಿಸಬೇಕಾದ ಮುಂಗಡ ಹಣವನ್ನು ಇಬ್ಬರೂ ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದರು. ಹಣ ಮಂಜೂರಾತಿ ಆದೇಶಗಳನ್ನು ತಿರುಚಿ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರಗಳನ್ನು ಕಾನೂನುಬಾಹಿರವಾಗಿ ಬದಲಾಯಿಸಿ ವಂಚಿಸಿದ್ದರು. ಹಣವನ್ನು ತಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಕಾಲೇಜಿನ ಆಂತರಿಕ ತನಿಖೆಯಲ್ಲಿ ಇಬ್ಬರು ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆ ಆಗಿತ್ತು. ಸಂಸ್ಥೆಯ ಅಧಿಕಾರಿಗಳ ಮುಂದೆಯೂ ಆರೋಪಿ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.