ADVERTISEMENT

ಜೋಪಡಿ ತೆರವು: ಮಧ್ಯಂತರ ವರದಿ ಸಲ್ಲಿಕೆ

ಸಮಗ್ರ ವರದಿ ಸಲ್ಲಿಸಲು ಮೂರು ದಿನ ಕಾಲಾವಕಾಶ ಕೇಳಿದ ಜಂಟಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 10:34 IST
Last Updated 23 ಜನವರಿ 2020, 10:34 IST
   

ಬೆಂಗಳೂರು:ಬೆಳ್ಳಂದೂರು ವಾರ್ಡ್‌ನ ಕರಿಯಮ್ಮನ ಅಗ್ರಹಾರ ಗ್ರಾಮದಲ್ಲಿ ನೂರಕ್ಕೂ ಅಧಿಕ ಜೋಪಡಿಗಳನ್ನು ತೆರವುಗೊಳಿಸಿದ ಸಂಬಂಧ ವಿಚಾರಣೆ ನಡೆಸಿರುವ ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ಅವರು ಈ ಸಂಬಂಧ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಬುಧವಾರ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

ಘಟನೆ ಕುರಿತು ಸಮಗ್ರ ವರದಿ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾರೆ. ಜೋಪಡಿಗಳನ್ನು ತೆರವುಗೊಳಿಸಿದ ಬಗ್ಗೆ 24 ತಾಸುಗಳಲ್ಲಿ ವರದಿ ನೀಡುವಂತೆ ಪಾಲಿಕೆ ಆಯುಕ್ತರು ಜಂಟಿ ಆಯುಕ್ತರಿಗೆ ಸೋಮವಾರ ಸೂಚನೆ ನೀಡಿದ್ದರು.

‘ಇದುವರೆಗಿನ ಬೆಳವಣಿಗೆ ಬಗ್ಗೆ ಜಂಟಿ ಆಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದು ಕೇವಲ ದಾಖಲಾತಿಗಳ ಆಧಾರದಲ್ಲಿ ಸಲ್ಲಿಸಿದ ವರದಿ. ಇನ್ನು ಮೂರು ದಿನಗಳಲ್ಲಿ ಅವರು ಸಮಗ್ರ ವರದಿ ಸಲ್ಲಿಸಲಿದ್ದಾರೆ’ ಎಂದು ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜೋಪಡಿಗಳ ನಿವಾಸಿಗಳು ನೈರ್ಮಲ್ಯ ಕಾಪಾಡುತ್ತಿಲ್ಲ ಎಂಬ ಹಿಂದೆಯೂ ದೂರು ಬಂದಿತ್ತು. ಜೋಪಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದವರಿಗೆ ಈ ಬಗ್ಗೆ 2018ರಲ್ಲೇ ನೋಟಿಸ್‌ ನೀಡಲಾಗಿತ್ತು. ನೈರ್ಮಲ್ಯ ಕಾಪಾಡದಿದ್ದರೆ ಜೋಪಡಿಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದೂ ಮಾಲೀಕರಿಗೆ ಸೂಚನೆ ನೀಡಲಾಗಿತ್ತು ಎಂಬ ಅಂಶವನ್ನು ಜಂಟಿ ಆಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

‘ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಾರಾಯಣಸ್ವಾಮಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆಯೇ ಜೋಪಡಿಗಳನ್ನು ತೆರವುಗೊಳಿಸುವ ಬಗ್ಗೆ ಇದೇ 18ರಂದು ಪೊಲೀಸ್‌ ಇಲಾಖೆಗೆ ಪತ್ರ ಬರೆದದ್ದು ನಿಜ. ಜೋಪಡಿಗಳನ್ನು ತೆರವುಗೊಳಿಸುವಾಗ ರಕ್ಷಣೆ ಕೊಡಿ ಎಂದು ಕೋರಿದ್ದು ನಿಜ. ಆದರೆ, ಯಾವ ದಿನ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಅವರು ಆ ಪತ್ರದಲ್ಲಿ ನಮೂದಿಸಿರಲಿಲ್ಲ ಎಂದು ಜಂಟಿ ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ಎಇಇ ಅವರನ್ನು ಈಗಾಗಲೇ ಮಾತೃ ಇಲಾಖೆಗೆ ಕಳುಹಿಸಿದ್ದೇವೆ. ಸಮಗ್ರ ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪುನರ್ವಸತಿ– ಪಾಲಿಕೆ ಮೌನ: ಮನೆ ಕಳೆದುಕೊಂಡು ಬೀದಿಪಾಲಾದವರ ಪುನರ್ವಸತಿ ಬಗ್ಗೆ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಬೆಳ್ಳಂದೂರು ವಲಯದ ವಿಶೇಷ ಆಯುಕ್ತ ಡಿ.ರಂದೀಪ್‌, ‘ಸದ್ಯಕ್ಕಂತೂ ನಾವು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜೋಪಡಿ ತೆರವುಗೊಳಿಸದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಿಬಿಎಂಪಿ ವ್ಯಾಪ್ತಿಯ ರಾತ್ರಿ ನಿರ್ವಸಿತರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಬಹುದಲ್ಲವೇ ಎಂಬ ಪ್ರಶ್ನೆಗೆ, ‘ಮಹದೇವಪುರದಲ್ಲಿ ಅಂತಹ ಕೇಂದ್ರಗಳಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.