ಬೆಂಗಳೂರು: ರಾಜ್ಯದಲ್ಲಿ ನೆಲಸಿರುವ ವಿದೇಶಿ ಅಕ್ರಮ ವಲಸಿಗರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ಮಾಹಿತಿ ಸಿಕ್ಕಿದ್ದು, ಅವರ ವಿರುದ್ಧದ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಅಕ್ರಮ ವಲಸಿಗರ ಪತ್ತೆಹಚ್ಚಿ ಗಡಿಪಾರು ಮಾಡುವ ಕಾರ್ಯಕ್ಕೆ ಪೊಲೀಸರು ವೇಗ ನೀಡಿದ್ದಾರೆ.
ವಿದ್ಯಾರ್ಥಿ, ಮೆಡಿಕಲ್ ಹಾಗೂ ಪ್ರವಾಸಿ ವೀಸಾದ ಮೇಲೆ ವಿದೇಶಿಗರು ಬಂದು, ವೀಸಾದ ಅವಧಿ ಮುಕ್ತಾಯವಾದ ಮೇಲೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಯೂರಿ ‘ಅಕ್ರಮ ದಂಧೆ’ಯಲ್ಲಿ ತೊಡಗುತ್ತಿದ್ದಾರೆ.
ರಾಜ್ಯದಲ್ಲಿ ಇದುವರೆಗೂ 525 ಮಂದಿ ವಿದೇಶಿ ಅಕ್ರಮ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆ ಪೈಕಿ 310 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಉಳಿದವರ ಗಡಿಪಾರಿಗೂ ಪ್ರಕ್ರಿಯೆಗಳೂ ಆರಂಭವಾಗಿವೆ. ಅಕ್ರಮ ವಲಸಿಗರ ವಿರುದ್ಧ ಒಟ್ಟು 65 ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ವರ್ಷದ ಜನವರಿ 1ರಿಂದ ಅಕ್ಟೋಬರ್ 8ರ ವರೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ 35 ವಿದೇಶಿಯರನ್ನು ಬಂಧಿಸಲಾಗಿದೆ. ವಿದೇಶಿ ಅಕ್ರಮ ವಲಸಿಗರಲ್ಲಿ ಹೆಚ್ಚಿನವರು ಡ್ರಗ್ಸ್ ಪೂರೈಕೆ ದಂಧೆಯಲ್ಲಿ ತೊಡಗಿರುವುದು ಪೊಲೀಸರ ಕಾರ್ಯಾಚರಣೆಯಲ್ಲಿ ಕಂಡುಬಂದಿದೆ.
‘ಡ್ರಗ್ಸ್ ಪೂರೈಕೆ, ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ವೇಳೆ ವಿದೇಶಿ ಆರೋಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ವಿದೇಶಿ ಪ್ರಜೆಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಅಕ್ಟೋಬರ್ 9ರಂದು 12 ದೇಶಗಳ ರಾಯಭಾರ ಕಚೇರಿಯ ಅಧಿಕಾರಿಗಳ ಜತೆಗೆ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ನಡೆದಿದೆ. ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್, ನೆದರ್ಲೆಂಡ್, ಇಸ್ರೇಲ್, ಅಮೆರಿಕಾ ದೇಶದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ನೈಜೀರಿಯಾದಿಂದ ಹೆಚ್ಚಿನ ಯುವಕರು ನಗರಕ್ಕೆ ಬರುತ್ತಿದ್ದು, ಅಪರಾಧ ಕೃತ್ಯದಲ್ಲಿ ತೊಡಗುತ್ತಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
‘ಯಾವುದೇ ಜಿಲ್ಲೆಯಲ್ಲಿ ವಿದೇಶಿಯರು ನೆಲಸಿದ್ದರೂ ಕಡ್ಡಾಯವಾಗಿ ಆಯಾ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ಒದಗಿಸಬೇಕು. ಇದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ವಿದೇಶಿ ಪ್ರಜೆಗಳಿಗೆ ಸೂಕ್ತ ಭದ್ರತೆ ಒದಗಿಸಲು ಅನುಕೂಲ ಆಗಲಿದೆ. ಈ ವಿಚಾರವನ್ನು ರಾಯಭಾರ ಕಚೇರಿ ಅಧಿಕಾರಿಗಳಿಗೂ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಸಭೆಯಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.
‘ಅಕ್ರಮ ವಲಸಿಗರ ಪತ್ತೆಗೆ ಠಾಣಾ ವ್ಯಾಪ್ತಿಯಲ್ಲಿ ಗುಪ್ತಚರ ಸಿಬ್ಬಂದಿ ನಿಯೋಜಿಸಲಾಗಿದೆ. ವಲಸಿಗರು ನೆಲಸಿರುವ ಸ್ಥಳಗಳ ಮೇಲೆ ಅವರು ನಿಗಾ ವಹಿಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.
ವಿದೇಶದಿಂದ ಬರುವ ಪ್ರಜೆಗಳು ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆಲಸಿರುವ ಪ್ರದೇಶ ಅವರ ಸಂಪರ್ಕ ಸಂಖ್ಯೆಯನ್ನು ಕಮಾಂಡ್ ಸೆಂಟರ್‌ಗೆ ಒದಗಿಸುವಂತೆ ಸೂಚಿಸಲಾಗಿದೆಸೀಮಾಂತ್ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.