ADVERTISEMENT

ಪೊಲೀಸರಿಂದ ಕಿರುಕುಳ ಆರೋಪ: ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 22:40 IST
Last Updated 24 ಜನವರಿ 2026, 22:40 IST
ವಿಧಾನಸೌಧ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯರನ್ನು ರಕ್ಷಿಸಿದ ಪೊಲೀಸರು
ವಿಧಾನಸೌಧ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯರನ್ನು ರಕ್ಷಿಸಿದ ಪೊಲೀಸರು   

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶ ನಾಗರಿಕರ ಸ್ಥಳಗಳ ಕುರಿತು ಮಾಹಿತಿ ನೀಡಿದ ಕಾರಣ ಸೋಲದೇವನಹಳ್ಳಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಎದುರು ಶನಿವಾರ ವೈದ್ಯರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕರ್ತವ್ಯನಿರತ ಪೊಲೀಸರು ತಕ್ಷಣ ಡಾ. ನಾಗೇಂದ್ರ ಶಿರೂರ್ (38) ಅವರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಸಿದುಕೊಂಡು, ಬೋರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಾಗೇಂದ್ರ ಶಿರೂರ್ ಅವರು ಎಲೆಕ್ಟ್ರಾನಿಕ್‌ ಸಿಟಿಯ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರಾಗಿದ್ದು, ಹಿಂದೂ ಜಾಗರಣಾ ವೇದಿಕೆ ಮತ್ತು ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರಾಗಿದ್ದಾರೆ.

‘ನಗರದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶ ನಾಗರಿಕರ ಸ್ಥಳಗಳನ್ನು ಪತ್ತೆ ಹಚ್ಚಿ ಪೊಲೀಸರ ಗಮನಕ್ಕೆ ತರುತ್ತಿದ್ದೆ. ಆದರೆ ಪೊಲೀಸರೇ ನನಗೆ ಕಿರುಕುಳ ನೀಡಲು ಆರಂಭಿಸಿದರು. ನಿತ್ಯ 15ರಿಂದ 20ಕ್ಕೂ ಹೆಚ್ಚು ಪೊಲೀಸರು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದರು. ಈ ವಿಚಾರಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೇ ನನ್ನ ಕುಟುಂಬದವರಿಗೂ ಹಿಂಸೆ ನೀಡಿದ್ದಾರೆ’ ಎಂದು ನಾಗೇಂದ್ರ ಅವರು ವಿಷ ಸೇವನೆಗೂ ಮುನ್ನ ಆರೋಪಿಸಿದ್ದರು.

ADVERTISEMENT

‘ಅಕ್ರಮವಾಗಿ ವಾಸವಾಗಿರುವವರನ್ನು ಹೊರ ಕಳುಹಿಸಲು ಹೋರಾಟ ಮಾಡಲು ಮುಂದಾಗಿದ್ದೇ ತಪ್ಪಾ’ ಎಂದು ನಾಗೇಂದ್ರ ವಿಷ ಕುಡಿಯಲು ಮುಂದಾದರು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ರಾಷ್ಟ್ರ ರಕ್ಷಣಾ ಪಡೆ ಪುನೀತ್ ಕೆರೆಹಳ್ಳಿ ಜೊತೆ ಓಡಾಡುತ್ತಿದ್ದ ನಾಗೇಂದ್ರ ಅವರು ಇತ್ತೀಚಿಗೆ ಬಾಂಗ್ಲಾದೇಶದ ವಲಸಿಗರ ಬಗ್ಗೆ ಮಾಹಿತಿ ನೀಡಿದ್ದರು. ಇದೇ ವಿಚಾರಕ್ಕೆ ಪುನೀತ್ ಕೆರೆಹಳ್ಳಿ ಮತ್ತು ನಾಗೇಂದ್ರಪ್ಪ ಮೇಲೆ ಪ್ರಕರಣ ದಾಖಲಾಗಿತ್ತು.

ಈ ಘಟನೆ ಬೆನ್ನಲ್ಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸೋಲದೇವನಹಳ್ಳಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌, ‘ನಾಗೇಂದ್ರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಅಧಿಕಾರಿಗಳು ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯಲು ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಹೇಳಿದ್ದಾರೆ. ಇದು ಭಾರತೀಯ ನ್ಯಾಯ ಸಂಹಿತೆಯ ಕಲಂ 226ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ.

ಅಕ್ರಮ ವಲಸಿಗರಿಗೆ ಬೆಂಬಲ: ಆರೋಪ

‘ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರ ಅವರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ವಿಧಾನಸೌಧದ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ‘ಎಕ್ಸ್‌’ನಲ್ಲಿ ಆರೋಪಿಸಿದ್ದಾರೆ.

‘ಒಂದೆಡೆ ದೇಶದ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮತ್ತೊಂದೆಡೆ ಜವಾಬ್ದಾರಿಯುತ ನಾಗರಿಕರು ಈ ಅಕ್ರಮಗಳನ್ನು ಎತ್ತಿ ತೋರಿಸಿದರೆ ಅವರನ್ನು ಗುರಿಯಾಗಿಸಿಕೊಂಡು ಕಿರುಕುಳ ಕೊಟ್ಟು ಜೈಲಿಗೆ ಅಟ್ಟಲಾಗುತ್ತಿದೆ. ಪುನೀತ್ ಕೆರೆಹಳ್ಳಿಯಂತಹ ಕಾರ್ಯಕರ್ತರ ಬಂಧನವೇ ಇದಕ್ಕೆ ಸಾಕ್ಷಿ’ ಎಂದು ತಿಳಿಸಿದ್ದಾರೆ. 

‘ಪೊಲೀಸ್ ಇಲಾಖೆಯ ಕರ್ತವ್ಯವನ್ನೇ ಜನ ಸಾಮಾನ್ಯರು ಮಾಡುತ್ತಿರುವಾಗ ಅವರಿಗೆ ರಕ್ಷಣೆ ನೀಡುವ ಬದಲು ಪೊಲೀಸರ ಮೂಲಕ ಕಿರುಕುಳ ಕೊಡಿಸುತ್ತಿರುವುದು ಯಾವ ನ್ಯಾಯ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.