
ಬೆಂಗಳೂರು: ಕಾವೇರಿ 2.0 ತಂತ್ರಾಂಶದಲ್ಲಿ ನೀಡಲಾಗಿರುವ ಕೆಲವು ವಿನಾಯತಿಗಳನ್ನು ದುರುಪಯೋಗ ಮಾಡಿಕೊಂಡು, ಕ್ರಯಪತ್ರಗಳನ್ನು ಅಕ್ರಮವಾಗಿ ನೋಂದಣಿ ಮಾಡಿದ್ದ ಸರ್ಜಾಪುರ ಉಪನೋಂದಣಾಧಿಕಾರಿ ರವಿಸಂಕನಗೌಡ ಅವರನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಅಮಾನತು ಮಾಡಿದೆ.
ರವಿಸಂಕನಗೌಡ ಅವರು ಕ್ರಯಪತ್ರಗಳನ್ನು ಅಕ್ರಮವಾಗಿ ನೋಂದಣಿ ಮಾಡುತ್ತಿರುವ ಬಗ್ಗೆ ಬಂದಿದ್ದ ದೂರುಗಳ ಆಧಾರದಲ್ಲಿ ಇಲಾಖೆಯು ತನಿಖೆಗೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶ ಆಧಾರಿತ ನೋಂದಣಿ ವ್ಯವಸ್ಥೆಯಲ್ಲಿ, ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕಾವೇರಿ 2.0 ತಂತ್ರಾಂಶದಲ್ಲಿ ವಿನಾಯತಿ ನೀಡಲಾಗಿದೆ. ಆರೋಪಿ ರವಿಸಂಕನಗೌಡ ಅವರು ಈ ವಿನಾಯತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶ ಇಲ್ಲದಿದ್ದರೂ ಕಾವೇರಿ 2.0 ತಂತ್ರಾಂಶದಲ್ಲಿ, ‘ನ್ಯಾಯಾಲಯದ ಆದೇಶದ ಆಧಾರದಲ್ಲಿ ನೋಂದಣಿ’ ಯನ್ನು ಆಯ್ಕೆ ಮಾಡುತ್ತಿದ್ದರು. ಈ ಮೂಲಕ ಹಲವು ಅಕ್ರಮ ನೋಂದಣಿಗಳನ್ನು ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಇಲಾಖೆಯು ಅಮಾನತು ಆದೇಶದಲ್ಲಿ ವಿವರಿಸಿದೆ.
ಸರ್ಜಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಡೆದಿರಬಹುದಾದ ಈ ರೀತಿಯ ಅಕ್ರಮಗಳ ಸಮಗ್ರ ತನಿಖೆಗೆ ಆದೇಶಿಸಿದ್ದು, ರವಿಸಂಕನಗೌಡ ಅವರನ್ನು ಅಮಾನತು ಮಾಡಿದೆ.