ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ವಿಚಾರದಲ್ಲಿ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಕಂದಾಯ, ಭೂಸರ್ವೇಕ್ಷಣೆ ಹಾಗೂ ಪೊಲೀಸ್ ಇಲಾಖೆಗಳು ಲೋಕಾಯುಕ್ತರ ಸೂಚನೆ ಬಳಿಕ ಕೊನೆಗೂ ಜಂಟಿ ಸರ್ವೆ ಆರಂಭಿಸಿವೆ.
ಇದನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿ ಕೇಂದ್ರ ಸರ್ಕಾರ 1974ರಲ್ಲೇ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದರ ಪರಿಸರ ಸೂಕ್ಷ್ಮವಲಯವನ್ನು ಗುರುತಿಸುವ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2018ರ ನವೆಂಬರ್‌ನಲ್ಲಿ ಈ ಕುರಿತು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಪರಿಸರ ಸೂಕ್ಷ್ಮವಲಯ ಹಾಗೂ ಅದರ ಗಡಿಯಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧವಿದೆ.
ಸಚಿವಾಲಯವು 2012ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ, ಯಾವುದೇ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು ಅಂತಿಮಗೊಳಿಸುವವರೆಗೆ ಉದ್ಯಾನದ ಗಡಿಯ 10 ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದೇ ಪರಿಗಣಿಸಬೇಕು ಎಂಬ ಅಂಶ ಇದೆ. ಆದರೆ, ಬನ್ನೇರುಘಟ್ಟ ಉದ್ಯಾನದ 10 ಕಿ.ಮೀ ವ್ಯಾಪ್ತಿಯ ಒಳಗೆ ಸಾಕಷ್ಟು ಕಲ್ಲು ಕ್ವಾರಿಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅನುಮತಿ ನೀಡಿತ್ತು. ಇವುಗಳ ಜೊತೆಗೆ ಅನೇಕರು ಯಾವುದೇ ಪರವಾನಗಿ ಇಲ್ಲದೆಯೇ ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್‌ಗಳನ್ನು ನಡೆಸುತ್ತಿದ್ದರು.
ಉದ್ಯಾನದ 10 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿರುವ ಗುತ್ತಿಗೆ ರದ್ದುಪಡಿಸುವಂತೆ ಕೋರಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು 2018ರ ಮೇ 7ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದರು. ಇದರ ಆಧಾರದಲ್ಲಿ ಇಲಾಖೆಯು ಕಟ್ಟಡ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ 27 ಘಟಕಗಳಿಗೆ ಹಾಗೂ 24 ಜಲ್ಲಿ ಕ್ರಷರ್‌ಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು.
ಆ ಬಳಿಕವೂ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸಂಬಂಧಪಟ್ಟ ಇಲಾಖೆಗಳು ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಅವರು ಜಂಟಿ ಸರ್ವೆ ನಡೆಸಲು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಹರೀಶ್ ನಾಯಕ್ ನೇತೃತ್ವದಲ್ಲಿ ಎಂಟು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದ್ದಾರೆ. ಈ ಸಮಿತಿಯಲ್ಲಿ ಭೂದಾಖಲೆಗಳ ಜಂಟಿ ನಿರ್ದೇಶಕರು, ಡಿವೈಎಸ್‌ಪಿ, ತಹಶೀಲ್ದಾರ್‌ಗಳು, ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದಾರೆ.
‘ನಾವು ಈಗಾಗಲೇ ಸಮೀಕ್ಷೆ ಆರಂಭಿಸಿದ್ದೇವೆ. ಕನ್ನನಾಯಕನ ಅಗ್ರಹಾರ, ಗೊಲ್ಲಹಳ್ಳಿ, ಲಕ್ಷ್ಮೀಪುರ, ಹಳೇಸಂಪಿಗೆಹಳ್ಳಿಯಲ್ಲಿ ಸರ್ವೆ ಮುಗಿಸಿದ್ದೇವೆ. ಶಿವನಹಳ್ಳಿ, ಮಹಾಂತಲಿಂಗಪುರ, ಕಲ್ಲಪುರದ ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇವೆ. ವಾರದೊಳಗೆ ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದೇವೆ’ ಎಂದು ಹರೀಶ್ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬನ್ನೇರುಘಟ್ಟ ಪರಿಸರದ ಕಲ್ಲು ಗಣಿಗಾರಿಕೆಯಿಂದ ವನ್ಯಜೀವಿ ಸಂಕುಲಗಳ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಪರಿಸರ ಕಾರ್ಯಕರ್ತರು ಸಾಕಷ್ಟು ಹೋರಾಟ ನಡೆಸಿದ ಬಳಿಕ ಜಿಲ್ಲಾಡಳಿತ ಎಚ್ಚೆತ್ತಿದೆ. ಇನ್ನಾದರೂ ಇಲ್ಲಿ ಗಣಿಗಾರಿಕೆಗೆ ಶಾಶ್ವತ ಕಡಿವಾಣ ಹಾಕಬೇಕು’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ಒತ್ತಾಯಿಸಿದರು.
ಅಕ್ರಮ ಗಣಿಗಾರಿಕೆ ಅವ್ಯಾಹತ
‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಪ್ರದೇಶ ಮಾತ್ರವಲ್ಲ, ಇಡೀ ಬೆಂಗಳೂರು ನಗರ ಜಿಲ್ಲೆಯಲ್ಲೇ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿವೆ. ಬಹುತೇಕ ಕಡೆ ರಾಜಕಾರಣಿಗಳ ಬೆಂಬಲಿಗರೇ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಪ್ರಭಾವಿ ವ್ಯಕ್ತಿಗಳೇ ಈ ದಂಧೆ ನಡೆಸುವುದರಿಂದ ಸ್ಥಳೀಯರೂ ಈ ಬಗ್ಗೆ ಚಕಾರ ಎತ್ತಲು ಹಿಂದೇಟು ಹಾಕುತ್ತಾರೆ. ಈ ಅಕ್ರಮದ ಬಗ್ಗೆ ಧ್ವನಿ ಎತ್ತಿದವರನ್ನು ಬೆದರಿಸಿದ ಪ್ರಕರಣಗಳೂ ನಡೆದಿವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪರಿಸರ ಕಾರ್ಯಕರ್ತರೊಬ್ಬರು ತಿಳಿಸಿದರು.
*
ರಾಷ್ಟ್ರೀಯ ಉದ್ಯಾನ ಪಕ್ಕದಲ್ಲಿ ಕ್ವಾರಿ ನಡೆಸಲು ಅವಕಾಶ ಕಲ್ಪಿಸಿರುವುದೇ ಅಚ್ಚರಿಯ ವಿಷಯ. ಸರ್ಕಾರದ ಮೂಗಿನ ನೇರದಲ್ಲೇ ಅಕ್ರಮಗಳು ನಡೆಯುತ್ತಿವೆ.
-ವಿಜಯ್ ನಿಶಾಂತ್, ಪರಿಸರ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.