ADVERTISEMENT

ವೃದ್ಧಾಪ್ಯ ವೇತನ ಅಕ್ರಮ: ಬಂಧನ

60 ವರ್ಷ ವಯಸ್ಸಾಗದಿದ್ದರೂ 205 ಮಂದಿಗೆ ವೇತನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 20:18 IST
Last Updated 20 ಮಾರ್ಚ್ 2023, 20:18 IST
ಕೆ.ಎಸ್. ಚತುರ್
ಕೆ.ಎಸ್. ಚತುರ್   

ಬೆಂಗಳೂರು: ಆಧಾರ್‌ ಸಂಖ್ಯೆಯಲ್ಲಿದ್ದ ಜನ್ಮ ದಿನಾಂಕ ತಿದ್ದಿ ಅನರ್ಹರಿಗೆ ವೃದ್ಧಾಪ್ಯ ವೇತನ ಕೊಡಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದ ಆರೋಪಿ ಕೆ.ಎಸ್. ಚತುರ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರದ ಚತುರ್, ತನ್ನದೇ ಮಳಿಗೆ ಇಟ್ಟುಕೊಂಡಿದ್ದ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಜನ
ರಿಗೆ ನೆರವಾಗುವ ಮಧ್ಯವರ್ತಿಯಾಗಿದ್ದ. ಮಳಿಗೆ ಮೇಲೆ ದಾಳಿ ಮಾಡಿ ಆರೋಪಿ
ಯನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಎಸ್‌.ಡಿ. ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲ್ಯಾಪ್‌ಟಾಪ್, 6 ಹಾರ್ಡ್‌ಡಿಸ್ಕ್, 4 ಮೊಬೈಲ್ ಹಾಗೂ 205 ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

₹ 5 ಸಾವಿರದಿಂದ ₹ 8 ಸಾವಿರ ಸಂಗ್ರಹ: ‘60 ವರ್ಷ ವಯಸ್ಸಾಗದಿದ್ದರೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ವೃದ್ಧಾಪ್ಯ ವೇತನ ಕೊಡಿಸುವುದಾಗಿ ಆರೋಪಿ ಚತುರ್ ಹೇಳುತ್ತಿದ್ದ. ಇದಕ್ಕಾಗಿ ತಲಾ ₹ 5 ಸಾವಿರದಿಂದ ₹ 8 ಸಾವಿರ ಪಡೆದುಕೊಳ್ಳುತ್ತಿದ್ದ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಜಾಲತಾಣದಿಂದ ಅರ್ಜಿದಾರರ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ. ಪಿಡಿಎಫ್‌ ಮಾದರಿಯ ಆಧಾರನಲ್ಲಿದ್ದ ಜನ್ಮದಿನಾಂಕವನ್ನು ತಿದ್ದುಪಡಿ ಮಾಡುತ್ತಿದ್ದ. ನಂತರ, ಆನ್‌ಲೈನ್ ಮೂಲಕ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುತ್ತಿದ್ದ.’

‘ಆಧಾರ್‌ನ ಜನ್ಮ ದಿನಾಂಕ ನಿಜವೆಂದು ನಂಬುತ್ತಿದ್ದ ಅಧಿಕಾರಿಗಳು, ವೇತನ ಮಂಜೂರು ಮಾಡುತ್ತಿದ್ದರು. ವೇತನ ಮಂಜೂರಾತಿ ಪತ್ರವನ್ನು ಅರ್ಜಿದಾರರಿಗೆ ನೀಡಿ ಹಣ ಪಡೆದುಕೊಳ್ಳುತ್ತಿದ್ದ’ ಎಂದು ಹೇಳಿದರು.

‘ಆರೋಪಿ ಇದುವರೆಗೂ 205 ಮಂದಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿಸಿದ್ದಾನೆ. ಆದರೆ, ಕೆಲವರಿಗೆ ಮಾತ್ರ ಹಣ ಸಂದಾಯವಾಗಿದೆ. 25 ವರ್ಷದಿಂದ 50 ವರ್ಷ ವಯಸ್ಸಿನವರಿಗೂ ಆರೋಪಿ ವೇತನ ಮಂಜೂರಾತಿ ಕೊಡಿಸಿದ್ದಾನೆ. ಎಲ್ಲ ಫಲಾನುಭವಿಗಳ ನೈಜ ಆಧಾರ್ ಪರಿಶೀಲನೆ ನಡೆಸಲಾಗುತ್ತಿದೆ.’

‘ವೇತನಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ದಾಖಲೆ ಅಪ್‌ಲೋಡ್ ಮಾಡಲು ಉಪ ತಹಶೀಲ್ದಾರ್ ಯೂಸರ್ ಐ.ಡಿ ಅಗತ್ಯವಿದೆ. ಹೀಗಾಗಿ, ಕೃತ್ಯದಲ್ಲಿ ಕೆಲ ಅಧಿಕಾರಿಗಳೂ ಭಾಗಿಯಾಗಿರುವ ಅನುಮಾವಿದೆ’ ಎಂದು ತಿಳಿಸಿದರು.

ಎರಡು ಕಡೆ ಪ್ರತ್ಯೇಕ ದಾಳಿ: ‘ಚತುರ್ ಮಳಿಗೆ ಮಾತ್ರವಲ್ಲದೇ ನಗರದ ಎರಡು ಕಡೆ ಪ್ರತ್ಯೇಕ ತಂಡಗಳ ಮೂಲಕ ದಾಳಿ ಮಾಡಲಾಗಿದೆ. ಮಳಿಗೆ ಮಾಲೀಕರು ತಲೆಮರೆಸಿಕೊಂಡಿದ್ದಾರೆ. ಕೆಲಸಗಾರರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.