ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯಲ್ಲಿ ಸಿಐಟಿಯು ಕಾರ್ಯದರ್ಶಿ ಕೆ.ಮಹಾಂತೇಶ್, ಲೇಖಕ ಎಲ್. ಹನುಮಂತಯ್ಯ, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಮಹದೇವಪ್ಪ, ನ್ಯಾಷನಲ್ ಕಾಲೇಜು ಅಧ್ಯಕ್ಷ ಸುಧಾಕರ್ ಕಸ್ತೂರಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸೌಮ್ಯಾ ಭಾಗವಹಿಸಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಮೂಢನಂಬಿಕೆಗಳ ತವರೂರು ಭಾರತ. ತಂತ್ರಜ್ಞಾನ ಮುಂದುವರಿದರೂ ಮೂಢನಂಬಿಕೆ ಆಚರಣೆ ನಿಂತಿಲ್ಲ. ನಾಗರಿಕ ಸಮಾಜ ಆರೋಗ್ಯವಾಗಿ ಇರಬೇಕಾದರೆ ವೈಜ್ಞಾನಿಕ ಮನೋಧರ್ಮ ಅಗತ್ಯ ಎಂದು ಲೇಖಕ ಎಲ್.ಹನುಮಂತಯ್ಯ ಪ್ರತಿಪಾದಿಸಿದರು.
ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ವೇದಿಕೆ ಮಂಗಳವಾರ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯಲ್ಲಿ ಮಾತನಾಡಿದರು.
‘ಅಧ್ಯಯನದ ಪ್ರಕಾರ, ದೇಶದಲ್ಲಿ ಶೇಕಡ 50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಾವು ಹಾಲು ಕುಡಿಯುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೂ ನಾಗರ ಪಂಚಮಿಯಂದು ಕಲ್ಲಿನ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲು ಎರೆದು ವ್ಯರ್ಥ ಮಾಡುತ್ತಿದ್ದೇವೆ. ಇದರ ಬದಲು ಈ ಮಕ್ಕಳಿಗೆ ಹಾಲು ನೀಡುವ ಮೂಲಕ ಆರೋಗ್ಯ ಸುಧಾರಣೆ ಮಾಡಬಹುದಾಗಿದೆ. ಅದೇ ರೀತಿ ಹೋಮ, ಹವನ ಹೆಸರಿನಲ್ಲಿ ಸಾಕಷ್ಟು ತುಪ್ಪ, ಎಣ್ಣೆ ಸುರಿಯುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಕರು, ಪೋಷಕರು, ಯಾರೇ ಆಗಲಿ ಯಾವುದೇ ವಿಷಯ ಬಗ್ಗೆ ಹೇಳಿದರೆ ಸುಮ್ಮನೆ ಒಪ‍್ಪಿಕೊಳ್ಳಬಾರದು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕಣ್ಣುಮುಚ್ಚಿ ಒಪ್ಪಿಕೊಂಡರೆ ಅನೇಕ ಅನಾಹುತಗಳಾಗಿರುವ ಉದಾಹರಣೆ ಇದೆ ಎಂದು ಹೇಳಿದರು.
ಖಭೌತ ವಿಜ್ಞಾನಿ ಪ್ರಜ್ಞಲ್ ಶಾಸ್ತ್ರಿ ಮಾತನಾಡಿ, ‘ವಿಜ್ಞಾನ ಎಷ್ಟೇ ಮುಂದುವರಿದರೂ ಸಮಾಜದಲ್ಲಿ ಲಿಂಗ ತಾರತಮ್ಯ ಮಾತ್ರ ನಿಂತಿಲ್ಲ. ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇದೆ. ಗಂಡು–ಹೆಣ್ಣು ಇಬ್ಬರನ್ನೂ ಸಮಾನವಾಗಿ ಕಾಣಬೇಕು. ಅಕ್ಷರಸ್ಥರೇ ಹೆಚ್ಚು ಮೂಢನಂಬಿಕೆ ಆಚರಿಸುತ್ತಿದ್ದಾರೆ. ಗ್ರಹಣದ ದಿನ ಮನೆಯಿಂದಲೇ ಹೊರಗೆ ಬಾರದಿರುವುದು, ಬೆಕ್ಕು ಅಡ್ಡ ಬಂದರೆ ಅಪಶುಕನ ಎಂದು ಬಿಂಬಿಸುವುದು ಸರಿಯಲ್ಲ’ ಎಂದರು.
ಎಚ್.ಸಿ.ಉಮೇಶ್ ಅವರು ವೈಚಾರಿಕ ಗೀತೆ ಹಾಡಿದರು. ನ್ಯಾಷನಲ್ ಕಾಲೇಜು ಅಧ್ಯಕ್ಷ ಸುಧಾಕರ್ ಎಸ್ತೂರಿ, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಮಹದೇವಪ್ಪ, ಸಿಐಟಿಯು ರಾಜ್ಯ ಮಂಡಳಿ ಕಾರ್ಯದರ್ಶಿ ಕೆ.ಮಹಾಂತೇಶ್, ಪ್ರಾಂಶುಪಾಲರಾದ ವೈ.ಸಿ.ಕಮಲಾ, ನ್ಯಾಷನಲ್ ಪದವಿಪೂರ್ವ ಪ್ರಾಂಶುಪಾಲರಾದ ಕಾಲೇಜಿನ ಸೌಮ್ಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.