ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್ ಆಯೋಜಿಸಿರುವ ‘ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶನದಲ್ಲಿ ಕಲಾಕೃತಿಗಳನ್ನು ವೀಕ್ಷಿಸುತ್ತಿರುವ ಯುವತಿ
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವಿಶೇಷ ಆಕರ್ಷಣೆ ಉಂಟು ಮಾಡಿದೆ. ಅ.19ರವರೆಗೆ ಈ ಪ್ರದರ್ಶನ ಮುಂದುವರಿಯಲಿದೆ.
ದೀಪಾವಳಿ ಪ್ರಯುಕ್ತ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೈಮಗ್ಗ, ಹಸ್ತಶಿಲ್ಪ ಮತ್ತು ಪರಂಪರಾತ್ಮಕ ಕಲೆಗಳನ್ನು ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗಿದೆ. ದೇಶದ ವಿವಿಧ ಭಾಗಗಳ ಕಲಾವಿದರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ತಾವು ತಯಾರಿಸಿದ ಕಲಾತ್ಮಕ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ದೇಶೀಯ ಉತ್ಸನ್ನಗಳನ್ನು ಪ್ರೋತ್ಸಾಹಿಸುವುದು ಹಾಗೂ ಹೊಸ ಪೀಳಿಗೆಗೆ ಸಾಂಪ‍್ರದಾಯಿಕ ಕಲಾ ಪ್ರಕಾರಗಳನ್ನು ಪರಿಚಯಿಸುವುದು ಈ ಪ್ರದರ್ಶನದ ಉದ್ದೇಶವಾಗಿದೆ.
ಚನ್ನಪಟ್ಟಣದ ಆಟಿಕೆಗಳು, ಉತ್ತರ ಪ್ರದೇಶದ ಖುರ್ಜಾದ ಮಣ್ಣಿನ ಪಾತ್ರೆ ಹಾಗೂ ಆಲಂಕಾರಿಕ ವಸ್ತುಗಳು, ಒಡಿಶಾದ ಡೋಕ್ರಾ ಕಲೆ ಹಾಗೂ ಮರದ ಆಟಿಕೆಗಳು, ವರ್ಣಚಿತ್ರಗಳು, ಆಭರಣಗಳು, ಮನೆ ಆಲಂಕಾರಿಕ ವಸ್ತುಗಳು ಸೇರಿದಂತೆ ಹಲವು ವೈವಿಧ್ಯ ಸಾಂಪ್ರದಾಯಿಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿವೆ.
ತಮಿಳುನಾಡು, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶದ ವಿವಿಧ ರಾಜ್ಯಗಳಿಂದ ಕಲಾವಿದರು ತಾವು ತಯಾರಿಸಿದ ಉತ್ಪನ್ನಗಳನ್ನು ತಂದಿದ್ದಾರೆ. ವಿವಿಧ ಬಗೆಯ ಸೀರೆಗಳು, ಪಿಠೋಪಕರಣ, ಬ್ಯಾಗ್‌ಗಳು, ಖಾದಿ ಬಟ್ಟೆಗಳೂ ದೊರೆಯುತ್ತಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.