ADVERTISEMENT

10 ಲಕ್ಷ ಚಿಂದಿ ಆಯುವವರ ಸಬಲೀಕರಣಕ್ಕೆ ಯೋಜನೆ: ಬೆಂಗಳೂರಿನಲ್ಲಿ ಪ್ರಯೋಗ

‘ರಿಸೈಕಲ್’ ಮತ್ತು ‘ಬಾಲ್ ಬಿವರೇಜ್‌ ಪ್ಯಾಕೇಜಿಂಗ್‌ ಇಂಡಿಯಾ’ ಸಹಭಾಗಿತ್ವದಲ್ಲಿ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 12:14 IST
Last Updated 22 ಡಿಸೆಂಬರ್ 2020, 12:14 IST
ಅಸಂಘಟಿತ ವಲಯಕ್ಕೆ ಸೇರುವ ಚಿಂದಿ ಆಯುವವರು (ಸಾಂದರ್ಭಿಕ ಚಿತ್ರ)
ಅಸಂಘಟಿತ ವಲಯಕ್ಕೆ ಸೇರುವ ಚಿಂದಿ ಆಯುವವರು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಭಾರತದಾದ್ಯಂತ 10 ಲಕ್ಷ ಚಿಂದಿ ಆಯುವವರ ಸಬಲೀಕರಣಕ್ಕೆ ದೇಶದ ಮೊದಲ ಡಿಜಿಟಲ್ ಸೊಲ್ಯೂಷನ್ಸ್ ವೇಸ್ಟ್–ಕಾಮರ್ಸ್ (ಡಬ್ಲ್ಯು–ಕಾಮರ್ಸ್) ಕಂಪನಿ ‘ರಿಸೈಕಲ್’ ಮತ್ತು ಅಲ್ಯೂಮಿನಿಯಂ ಕ್ಯಾನ್, ಬಾಟಲ್ ಹಾಗೂ ಕಪ್‌ ತಯಾರಕ ಕಂಪನಿ ‘ಬಾಲ್ ಬಿವರೇಜ್‌ ಪ್ಯಾಕೇಜಿಂಗ್‌ ಇಂಡಿಯಾ’ಗಳು ಮುಂದಾಗಿವೆ.

ಉಭಯ ಕಂಪನಿಗಳ ಸಹಭಾಗಿತ್ವದಲ್ಲಿ, ಬಳಸಿದ ಅಲ್ಯೂಮಿನಿಯಂ ಪಾನೀಯ ಕ್ಯಾನ್‌ಗಳ ಸಂಗ್ರಹ ಮತ್ತು ಮರುಬಳಕೆಯ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ.

ಬೆಂಗಳೂರಿನ 5,000 ಚಿಂದಿ ಆಯುವವರಿಗೆ ನಿರಂತರ ಆದಾಯ ಗಳಿಸಲು ನೆರವಾಗುವುದರೊಂದಿಗೆ ಅವರ ಜೀವನದ ಮೇಲೆ ಪರಿಣಾಮ ಬೀರುವ ಗುರಿಯೊಂದಿಗೆ ಈ ಪ್ರಾಯೋಗಿಕ ಯೋಜನೆ ಹಮ್ಮಿಕೊಳ್ಳಲಾಗಿದೆ.

ADVERTISEMENT

ಈ ಯೋಜನೆಯಡಿ ಬಡಾವಣೆಗಳಿಂದ, ಅಪಾರ್ಟ್‌ಮೆಂಟ್‌ಗಳಿಂದ, ಉದ್ಯಮ ಪಾರ್ಕ್‌ಗಳಿಂದ, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಿಂದ ‘ರಿಸೈಕಲ್’ ಕಂಪನಿಯು ತನ್ನ ಸಂಪರ್ಕದಲ್ಲಿರುವ ಚಿಂದಿ ಆಯುವವರ ಮೂಲಕ ಬಳಸಿದ ಅಲ್ಯೂಮಿನಿಯಂ ಪಾನೀಯ ಕ್ಯಾನ್‌ಗಳನ್ನು ಸಂಗ್ರಹಿಸಲಿದೆ. ಈ ಕ್ಯಾನ್‌ಗಳನ್ನು ಮರುಬಳಕೆಗಾಗಿ ‘ಬಾಲ್ ಬಿವರೇಜ್‌ ಪ್ಯಾಕೇಜಿಂಗ್‌ ಇಂಡಿಯಾ’ ಕಂಪನಿಗೆ ಕಳುಹಿಸಿಕೊಡಲಾಗುತ್ತದೆ.

ಆರು ತಿಂಗಳ ಈ ಪ್ರಾಯೋಗಿಕ ಯೋಜನೆಯನ್ನು ವಿಸ್ತರಿಸಲಾಗವುದು. ತ್ಯಾಜ್ಯ ಸಂಗ್ರಹಣಾ ಕ್ಷೇತ್ರವನ್ನು ವ್ಯವಸ್ಥಿತಗೊಳಿಸುವುದು ಮತ್ತು ಚಿಂದಿ ಆಯುವವರ ಜೀವನ ಗುಣಮಟ್ಟ ಸುಧಾರಿಸುವ ಉದ್ದೇಶದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಉಭಯ ಕಂಪನಿಗಳು ತಿಳಿಸಿವೆ.

‘ನಗರ ಪ್ರದೇಶಗಳ ಅನೌಪಚಾರಿಕ ಉದ್ಯೋಗಗಳ ಯಾದಿಯಲ್ಲಿ ಚಿಂದಿ ಆಯುವುದು ಅತ್ಯಂತ ಕೆಳಮಟ್ಟದಲ್ಲಿದೆ. ಇದರಲ್ಲಿ ಮಹಿಳೆಯರೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಸುಮಾರು 40 ಲಕ್ಷ ಚಿಂದಿ ಆಯವವರಿದ್ದು, ಅವರ ಜೀವನ ಮರುಬಳಕೆಯ ತ್ಯಾಜ್ಯದ ಮೇಲೆ ಅವಲಂಬಿತವಾಗಿದೆ. ಅಲ್ಯೂಮಿನಿಯಂ ಹೆಚ್ಚು ಮೌಲ್ಯವುಳ್ಳ ಲೋಹವಾಗಿದ್ದು, ಈ ಯೋಜನೆಯು ಚಿಂದಿ ಆಯುವವರ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿದೆ’ ಎಂದು ‘ರಿಸೈಕಲ್’ನ ನಿರ್ದೇಶಕ ಅಫ್ಸರ್ ಅಹ್ಮದ್ ಮೊಹಮ್ಮದ್ ತಿಳಿಸಿದ್ದಾರೆ.

ಈ ಸಹಭಾಗಿತ್ವದ ಬಗ್ಗೆ ನಾವು ಹರ್ಷಚಿತ್ತರಾಗಿದ್ದೇವೆ. ಏಕೆಂದರೆ ಇದು ಚಿಂದಿ ಆಯುವವರ ಜೀವನವನ್ನು ಸುಧಾರಿಸಲು ಸಹಾಯ ಮಾಡಲಿದೆ ಎಂದು ‘ಬಾಲ್ ಬಿವರೇಜ್ ಪ್ಯಾಕೇಜಿಂಗ್‌’, ವ್ಯವಸ್ಥಾಪಕ ನಿರ್ದೇಶಕ ಅಮಿತ್ ಲಹೋತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.