ADVERTISEMENT

ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಆರಂಭಿಕ ದಿನಗಳಲ್ಲಿ ಲಾಭ ಗಳಿಸಿದ್ದ ಕ್ಯಾಬ್‌ಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 22:11 IST
Last Updated 8 ಡಿಸೆಂಬರ್ 2025, 22:11 IST
ಇಂಡಿಗೋ ವಿಮಾನ
ಇಂಡಿಗೋ ವಿಮಾನ   

ಬೆಂಗಳೂರು: ಇಂಡಿಗೊ ವಿಮಾನಗಳ ಹಾರಾಟ ರದ್ದಾದ ಆರಂಭಿಕ ದಿನಗಳಲ್ಲಿ ಉಂಟಾದ ಅವ್ಯವಸ್ಥೆಯ ಲಾಭ ಪಡೆದಿದ್ದ ಟ್ಯಾಕ್ಸಿಗಳು ಈಗ ಪ್ರಯಾಣಿಕರಿಲ್ಲದೇ ನಷ್ಟಕ್ಕೆ ಒಳಗಾಗುತ್ತಿವೆ.  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (ಕೆಐಎ) ಅಗ್ರಿಗೇಟರ್‌ ಕಂಪನಿಗಳ ಕ್ಯಾಬ್‌ ಮತ್ತು ಖಾಸಗಿ ಟ್ಯಾಕ್ಸಿಗಳ ಆದಾಯ ಕುಸಿತ ಕಂಡಿದೆ.

ವಿಮಾನ ನಿಲ್ದಾಣದ ಸುತ್ತಮುತ್ತ 10 ಸಾವಿರಕ್ಕೂ ಅಧಿಕ ಟ್ಯಾಕ್ಸಿಗಳಿವೆ. ಇಂಡಿಗೊ ವಿಮಾನ ಸಂಚಾರ ದಿಢೀರ್‌ ರದ್ದಾದಾಗ ವಾಪಸ್‌ ಹೋಗುವವರ ಸಂಖ್ಯೆ ಏರಿದ್ದರಿಂದ ಒಮ್ಮೆಲೇ ಟ್ಯಾಕ್ಸಿಗಳಿಗೆ ಬೇಡಿಕೆ ಉಂಟಾಗಿತ್ತು. ಪರಿಸ್ಥಿತಿಯ ಲಾಭ ಪಡೆಯಲು ಟ್ಯಾಕ್ಸಿ ಬಾಡಿಗೆ ದರವನ್ನು ವಿಪರೀತವಾಗಿ ಏರಿಸಲಾಗಿತ್ತು. ಇದರ ಕುತರಿತು ಪ್ರಚಾರವೂ ವ್ಯಾಪಕವಾಗಿ ಆಗಿತ್ತು. ವಿಮಾನ ಹಾರಾಟದ ಗೊಂದಲದಿಂದಾಗಿ ಈಗ ವಿಮಾನ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಇರುವ ಕಡಿಮೆ ಸಂಖ್ಯೆಯ ಪ್ರಯಾಣಿಕರು ಕೂಡ ಟ್ಯಾಕ್ಸಿಗೆ ಅಧಿಕ ಬಾಡಿಗೆ ದರ ನೀಡಲು ಹಿಂಜರಿಯುತ್ತಿದ್ದಾರೆ. 

‘ವಿಮಾನ ಸಂಚಾರ ರದ್ದಾದಾಗ ನಗರದ ಕಡೆಗೆ ಸಂಚರಿಸುವವರ ಸಂಖ್ಯೆ ಬಹಳ ಹೆಚ್ಚಿತ್ತು. ಗುರುವಾರ (ಡಿ.4) ಬೇಡಿಕೆ ಉತ್ತುಂಗಕ್ಕೆ ತಲುಪಿತ್ತು. ಆ ನಂತರ ಸ್ವಲ್ಪ ಕಡಿಮೆಯಾಗಿತ್ತು. ಕಳೆದ ಎರಡು ದಿನಗಳಿಂದ ಯಾವುದೇ ಬೇಡಿಕೆ ಇಲ್ಲ’ ಎಂದು ಟ್ಯಾಕ್ಸಿ ಚಾಲಕ ಅನ್ಸರ್‌ ಪಾಷಾ ತಿಳಿಸಿದರು.

ADVERTISEMENT

‘ಕೆಐಎಯಿಂದ ಮೆಜೆಸ್ಟಿಕ್‌ಗೆ ಸಾಮಾನ್ಯವಾಗಿ ₹1200 ದರ ಇರುತ್ತದೆ. ವಿಮಾನ ಹಾರಾಟವಿಲ್ಲದೆ ಉಂಟಾದ ಗೊಂದಲದ ಸಮಯದಲ್ಲಿ ₹1,800ರಿಂದ ₹3,000 ವರೆಗೆ ‍ಪ್ರಯಾಣಿಕರಿಂದ ಟ್ಯಾಕ್ಸಿಯವರು ವಸೂಲಿ ಮಾಡಿದ್ದರು ಎಂದು ವಿವರ ನೀಡಿದರು.

ಕಮಿಷನ್ ಆಧಾರಿತ ಓಲಾ ಮತ್ತು ಉಬರ್‌ನ ದರಗಳು ದೈನಂದಿನ ದರಗಳನ್ನು ನಿಗದಿಪಡಿಸಲು ವಿಮಾನ ದತ್ತಾಂಶವನ್ನು ಅವಲಂಬಿಸಿರುತ್ತವೆ. ಹಾಗಾಗಿ ವಿಪರೀತ ಹೆಚ್ಚಿಸಲು ಅವಕಾಶಗಳಿರುವುದಿಲ್ಲ. ಆದರೂ, ಬೇಡಿಕೆ ಕುಸಿದಾಗ ಉಂಟಾಗುವ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ಚಾಲಕರು ಹೇಳಿದರು.

140 ಇಂಡಿಗೊ ವಿಮಾನ ರದ್ದು

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಇಂಡಿಗೊ ಕಾರ್ಯಾಚರಣೆ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಗಳುತ್ತಿದೆ. ಆದರೂ ಸೋಮವಾರ 140 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಸಾಮೂಹಿಕ ರದ್ದತಿಯಿಂದಾಗಿ ಮರು ಬುಕ್ಕಿಂಗ್‌ ವೆಚ್ಚ ಲಗೇಜ್‌ಗಳನ್ನು ವಾಪಸ್‌ ಪಡೆಯಲು ಪ್ರಯಾಣಿಕರು ಸೋಮವಾರವೂ ಹೈರಾಣಾದರು. ಟರ್ಮಿನಲ್ 1ರಲ್ಲಿ ಜನದಟ್ಟಣೆ ಕಡಿಮೆಯಾಗಿದ್ದರೂ ಒಂದಷ್ಟು ಜನರು ನಿಲ್ದಾಣದಲ್ಲಿ ಉಳಿದಿದ್ದಾರೆ. ಹಲವರು ತಾವು ಹೋಗಬೇಕಾದ ಸ್ಥಳಕ್ಕೆ ರಸ್ತೆ ಸಾರಿಗೆ ರೈಲುಗಳನ್ನು ಅವಲಂಬಿಸಬೇಕಾಯಿತು. ಕೊಚ್ಚಿ ಜೈಸಲ್ಮೇರ್ ಗೋರಖಪುರ ಹೈದರಾಬಾದ್ ದೆಹಲಿ ಇಂದೋರ್ ಮಂಗಳೂರು ಕೊಯಮತ್ತೂರು ಚೆನ್ನೈ ಸೂರತ್ ಮತ್ತು ಗೋವಾ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗುವ ವಿಮಾನಗಳು ಸೋಮವಾರ ರದ್ದಾಗಿದ್ದವು. ‘ಡಿಸೆಂಬರ್‌ 9ರಂದು ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ವಿಮಾನದಲ್ಲಿ ಹೋಗಲು ಸೀಟು ಕಾಯ್ದಿರಿಸಿದ್ದೆ. ಆದರೆ ಸಂಜೆ 6.45ರ ವಿಮಾನ ರದ್ದಾಗಿದೆ’ ಎಂದು ಪ್ರಯಾಣಿಕ ಮೊಹಮ್ಮದ್ ಅನಸ್ ಹೇಳಿಕೊಂಡರು. ‘ಇಂಡಿಗೊ ಸಂಸ್ಥೆಯವರು ಯಾರೂ ವಿಮಾನ ನಿಲ್ದಾಣದಲ್ಲಿ ಇಲ್ಲ. ನಾನು ಎರಡು ದಿನಗಳವರೆಗೆ ನಗರದಲ್ಲಿ ಕೊಠಡಿ ಕಾಯ್ದಿರಿಸಿದ್ದೆ. ಈಗಾಗಲೇ ಅಂದಾಜು ₹50000 ನಷ್ಟವಾಗಿದೆ. ಮುಂಚಿತವಾಗಿ ಯಾವುದೇ ಸೂಚನೆ ನೀಡಿಲ್ಲ. ಈಗಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ದೂರಿದರು. ‘ಅಬುಧಾಬಿ ಸಮ್ಮೇಳನದಿಂದ ಹಿಂತಿರುಗುವಾಗ ಲಗೇಜ್‌ಗಳನ್ನು ಪ್ರತ್ಯೇಕವಾಗಿ ಕಳುಹಿಸಲಾಗಿತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಲಗೇಜ್‌ಗಾಗಿ ಎರಡು ದಿನ ಕಾಯಬೇಕಾಯಿತು’ ಎಂದು ಉದ್ಯಮಿ ಪಂಕಜ್ ಅಸಮಾಧಾನ ತೋಡಿಕೊಂಡರು.

‘ಪ್ರಯಾಣ ರದ್ದು, ಹೋಟೆಲ್‌ ದರವೂ ದುಬಾರಿ’

ಇಂಡಿಗೊ ವಿಮಾನಗಳ ಸಂಚಾರದಲ್ಲಿನ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವುದು ಅಷ್ಟೇ ಅಲ್ಲದೆ, ವಾಸ್ತವ್ಯಕ್ಕೆ ಹೋಟೆಲ್‌ಗಳು ದುಬಾರಿ ಹಣ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ. ಕೆಲವು ಹೋಟೆಲ್‌, ಲಾಡ್ಜ್‌ಗಳಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ದರ ಹೆಚ್ಚಿಸಿರುವ ಆರೋಪ ಕೇಳಿ ಬಂದಿದೆ.

6–7 ದಿನದಿಂದ ಇಂಡಿಗೊ ವಿಮಾನ ಸಂಚಾರ ರದ್ದುಪಡಿಸಿದ್ದರಿಂದ ಬೆಂಗಳೂರಿನಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ರಾತ್ರಿ ವೇಳೆ ಪ್ರಯಾಣ ಮಾಡಬೇಕಾಗಿದ್ದವರು ಪರ್ಯಾಯ ವಿಮಾನ ಸಂಚಾರಕ್ಕೆ ಅವಕಾಶವೂ ಇಲ್ಲದ ಕಾರಣ ವಾಸ್ತವ್ಯಕ್ಕೆ ಮುಂದಾದರು.

ಈ ವೇಳೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ಗಳಲ್ಲಿ ದರ ವಿಚಾರಿಸಿದಾಗ ಮೂರು ಪಟ್ಟು ಏರಿಕೆಯಾಗಿರುವುದು ಕಂಡುಬಂದಿದೆ.

ಸಾಮಾನ್ಯ ದಿನಗಳಲ್ಲಿ ₹3,938ಕ್ಕೆ ಲಭ್ಯವಿರುವ ಕೊಠಡಿ ದರ ₹11,000ಕ್ಕೆ ಏರಿಕೆಯಾಗಿತ್ತು. ಮತ್ತೊಂದು ಹೋಟೆಲ್‌ನಲ್ಲಿ ₹3,000 ಇದ್ದ ದರವನ್ನು ಈಗ ₹10,000ಕ್ಕೆ ಹೆಚ್ಚಿಸಲಾಗಿದೆ. ಕೆಲವು ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ದರ ಪಾವತಿಸಿ ಕೊಠಡಿ ಪಡೆದಿದ್ದಾರೆ.

‘ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು
ದೆಹಲಿಗೆ ಹೊರಟಿದ್ದೆ. ಆದರೆ, ವಿಮಾನ ಸಂಚಾರ ರದ್ದಾದ ಕಾರಣ ಇಲ್ಲಿಯೇ ಉಳಿಯಲು ಕೊಠಡಿ ವಿಚಾರಿಸಿದರೆ ₹7,000ದಿಂದ ₹1,0000 ಆಗಬಹುದು ಎಂದು
ಹೋಟೆಲ್‌ ಸಿಬ್ಬಂದಿ ತಿಳಿಸಿದರು. ಕೊನೆಗೆ ಬೆಂಗಳೂರಿಗೆ ವಾಪಸಾಗಲು ಕ್ಯಾಬ್ ಬುಕ್‌ ಮಾಡಿದರೆ ₹2,500 ಪಾವತಿಸಬೇಕಾಯಿತು. ನಮ್ಮದಲ್ಲದ ತಪ್ಪಿಗೆ ಹೊರೆ ಅನುಭವಿಸಿದ್ದೇವೆ. ಈ ವೆಚ್ಚವನ್ನು ಇಂಡಿಗೊ ವಿಮಾನಯಾನ ಸಂಸ್ಥೆಯವರು ಭರಿಸಬೇಕು’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಪ್ರೀತಿ ಒತ್ತಾಯಿಸಿದರು.

‘ಬೆಂಗಳೂರು ವಿಶ್ವ ದರ್ಜೆಯ ನಗರ. ವಿಮಾನಯಾನ ಇಲ್ಲವೇ ಸಾರಿಗೆ ಸಮಸ್ಯೆಯಾದರೆ ಹೋಟೆಲ್‌ಗಳಲ್ಲಿ ಕೊಠಡಿಗಳ ದರ ಏರಿಕೆ ಮಾಡಲಾಗುತ್ತದೆ. ಇದೊಂದು ರೀತಿಯ ಹಗಲು ದರೋಡೆ ’ ಎಂದು ರಾಜಸ್ಥಾನದ ಜೈಸಲ್ಮೇರ್‌ಗೆ ಹೋಗಬೇಕಿದ್ದ ಉದ್ಯಮಿ ಸೆಂಥಿಲ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.