ADVERTISEMENT

ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರು ಬರುತ್ತಿಲ್ಲ– ಜಿಬಿಎ ಆಯುಕ್ತ ಮಹೇಶ್ವರ್‌ ರಾವ್

ರಸ್ತೆ ಬದಿ ಊಟ ಮಾಡುತ್ತಾರೆ; ಕ್ಯಾಂಟೀನ್‌ಗೆ ಬರಲ್ಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 23:30 IST
Last Updated 16 ಫೆಬ್ರುವರಿ 2026, 23:30 IST
-
-   

ಬೆಂಗಳೂರು: ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರು ಬರುತ್ತಿಲ್ಲ. ಇದಕ್ಕೆ ಕಾರಣ ಗೊತ್ತಾಗುತ್ತಿಲ್ಲ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹೇಳಿದರು.

‘ರಸ್ತೆ ಬದಿಯಲ್ಲಿರುವ ಹೋಟೆಲ್‌ ಅಥವಾ ಬೀದಿಬದಿ ವ್ಯಾಪಾರಿಗಳ ಬಳಿಗೆ ತೆರಳಿ ಊಟ ಮಾಡುತ್ತಾರೆ. ಆದರೆ, ಇಂದಿರಾ ಕ್ಯಾಂಟೀನ್‌ಗೆ ಬರುತ್ತಿಲ್ಲ. ಈ ಬಗ್ಗೆ ಎಲ್ಲ ಪಾಲಿಕೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂದಿನ ಯೋಜನೆಯನ್ನು ಸಿದ್ಧಪಡಿಸಲಾಗುವುದು’ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

‘ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇರುವುದಿಲ್ಲ ಎಂಬ ದೂರಿದೆ. ಅದರ ಜೊತೆಗೆ ಆಹಾರದ ಗುಣಮಟ್ಟ ಸರಿ ಇಲ್ಲ ಎಂಬ ಮಾತೂ ಇದೆ. ಹೊಸ ಮೆನುವಿನೊಂದಿಗೆ ಆಹಾರದ ಗುಣಮಟ್ಟ ಹೆಚ್ಚಿಸುವ ಜೊತೆಗೆ ಗ್ರಾಹಕರನ್ನು ಸೆಳೆಯಲು ಏನು ಮಾಡಬೇಕು ಎಂಬ ಬಗ್ಗೆ ಆಲೋಚಿಸಬೇಕಿದೆ’ ಎಂದರು.

ADVERTISEMENT

‘ಇಂದಿರಾ ಕ್ಯಾಂಟೀನ್ ಅತ್ಯುತ್ತಮ ಯೋಜನೆಯಾಗಿದ್ದು, ದುಡಿಯುವ ವರ್ಗಕ್ಕೆ ಅತ್ಯಂತ ಕಡಿಮೆ ದರದಲ್ಲಿ ಊಟ ನೀಡಲಾಗುತ್ತಿದೆ. ಇಷ್ಟು ಕಡಿಮೆ ದರದಲ್ಲಿ ಯಾರೂ ನೀಡುವುದಿಲ್ಲ. ಆದರೆ ಜನರೇ ಬರುತ್ತಿಲ್ಲ. ಹೊಸದಾಗಿ ಇಂದಿರಾ ಕ್ಯಾಂಟೀನ್‌ ತೆರೆಯಲು ಸ್ಥಳಗಳನ್ನು ಪರಿಶೀಲಿಸಲಾಗುತ್ತದೆ. ಅದಕ್ಕೂ ಮುನ್ನ ಇರುವ ಕ್ಯಾಂಟೀನ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಮುಖ್ಯಮಂತ್ರಿಯವರ ವಿಶೇಷ ನಿಧಿಯಿಂದ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು ₹1,200 ಕೋಟಿ ವೆಚ್ಚದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಎರಡು ತಿಂಗಳಲ್ಲಿ ರಸ್ತೆಗಳ ಚಿತ್ರಣ ಬದಲಾಗಲಿದೆ ಎಂದರು.

ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಂದು ಟ್ರಾನ್ಸ್‌ಫರ್‌ ಸ್ಟೇಷನ್‌ ಅನ್ನು ಸ್ಥಾಪಿಸಲಾಗುತ್ತಿದೆ. ಇದರ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿದ್ದು, ಸದ್ಯದಲ್ಲಿಯೇ ಸ್ಥಾಪನೆ ಕಾರ್ಯ ಆರಂಭವಾಗುತ್ತದೆ. ಇದರಿಂದ ರಸ್ತೆ ಬದಿ ತ್ಯಾಜ್ಯ ವಿಂಗಡಣೆ ತಪ್ಪಲಿದೆ. ಆಟೊದಿಂದ ನೇರವಾಗಿ ಕಸ ಟ್ರಾನ್ಸ್‌ಫರ್‌ ಸ್ಟೇಷನ್‌ಗೆ ವಿಲೇವಾರಿಯಾಗಲಿದೆ ಎಂದು ಹೇಳಿದರು.

‘ಮನೆ ಮುಂದೆ ವಾಹನಕ್ಕೆ ಶುಲ್ಕ ಇಲ್ಲ’

‘ಮನೆ ಮುಂದೆ ನಿಲ್ಲಿಸುವ ವಾಹನಕ್ಕೆ ಶುಲ್ಕ ವಿಧಿಸಲಾಗುತ್ತದೆ ಎಂಬ ವಿಷಯ ಪ್ರತಿ ಬಜೆಟ್‌ ಸಂದರ್ಭದಲ್ಲೂ ಮುನ್ನೆಲೆಗೆ ಬರುತ್ತದೆ. ಜನಪ್ರತಿನಿಧಿಗಳ ಕೌನ್ಸಿಲ್‌ನಲ್ಲೂ ಇದು ಪ್ರಸ್ತಾವವಾಗಿತ್ತು. ಮನೆ ಮುಂದೆ ನಿಲ್ಲಿಸುವ ವಾಹನಕ್ಕೆ ಶುಲ್ಕ ವಿಧಿಸಿದರೆ ಜಗಳವಾಗುತ್ತದೆ ಅಷ್ಟೆ. ಇಂತಹ ಪ್ರಸ್ತಾವ ಇಲ್ಲ’ ಎಂದು ಮಹೇಶ್ವರ್‌ ರಾವ್‌ ಹೇಳಿದರು. ‘ಮನೆ ಮುಂದೆ ವಾಹನಗಳನ್ನು ನಿಲ್ಲಿಸಲು ಅವಕಾಶ ಇಲ್ಲ ಎಂದರೆ ಅವರಿಗೆ ಸುತ್ತಮುತ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ. ಯಾವ ವ್ಯವಸ್ಥೆಯನ್ನೂ ಮಾಡದೆ ಶುಲ್ಕ ವಿಧಿಸಿದರೆ ಸಮಸ್ಯೆಯಾಗುತ್ತದೆ. ನಗರದ ವಸತಿ ಪ್ರದೇಶದಲ್ಲಿ ಖಾಸಗಿ ಸ್ಥಳಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗುತ್ತದೆ. ಆ ಎಲ್ಲ ಸೌಲಭ್ಯಗಳನ್ನು ನಾವು ಮೊದಲು ಕಲ್ಪಿಸಿ ನಂತರ ಶುಲ್ಕದ ಬಗ್ಗೆ ಆಲೋಚಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಯಾಂತ್ರೀಕೃತ ಪಾರ್ಕಿಂಗ್‌

ನಗರದಲ್ಲಿರುವ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಯಾಂತ್ರೀಕೃತ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲು ಚಿಂತಿಸಲಾಗುತ್ತಿದೆ ಎಂದು ಮಹೇಶ್ವರ್‌ ರಾವ್‌ ಹೇಳಿದರು. ‘ವಾಹನಗಳ ನಿಲುಗಡೆಗೆ ಎಲ್ಲೆಡೆ ಉತ್ತಮ ಸೌಕರ್ಯ ಕಲ್ಪಿಸಲು ಸಾಮಾನ್ಯ ಪಾರ್ಕಿಂಗ್‌ ಸೌಲಭ್ಯ ಬದಲು ಯಾಂತ್ರೀಕೃತ ವ್ಯವಸ್ಥೆ ಕಲ್ಪಿಸಲು ಬಿಎಂಆರ್‌ಸಿಎಲ್‌ನೊಂದಿಗೆ ಮಾತುಕತೆ ನಡೆಸಲಾಗಿದೆ. ಯೋಜನೆ ಬಗ್ಗೆ ವಿವರವಾದ ವರದಿ ನೀಡುವಂತೆ ಅವರನ್ನು ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ’ ಎಂದರು. ಐದು ನಗರ ಪಾಲಿಕೆಗಳಲ್ಲಿ ಕನಿಷ್ಠ 15 ರಸ್ತೆಗಳಲ್ಲಿ ‘ಪೇ ಆ್ಯಂಡ್‌ ಪಾರ್ಕ್‌’ ವ್ಯವಸ್ಥೆಯನ್ನು ಜಾರಿಗೊಳಿಸಲು ಸೂಚಿಸಲಾಗಿದೆ. ಎಲ್ಲೆಡೆ ಟೆಂಡರ್‌ ಕರೆಯಲಾಗಿದ್ದು ಹಂತಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

ಆಸ್ತಿ ಹರಾಜು ಇಂದಿನಿಂದ

ಜಿಬಿಎ ವ್ಯಾಪ್ತಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಆಸ್ತಿಗಳಿಂದ ₹437 ಕೋಟಿ ತೆರಿಗೆ ಹಲವು ವರ್ಷಗಳಿಂದ ಬಾಕಿ ಇದ್ದು ಅದನ್ನು ವಸೂಲಿ ಮಾಡಲು ಸ್ವತ್ತುಗಳ ಹರಾಜು ಪ್ರಕ್ರಿಯೆ ಫೆ.17ರಿಂದ ಆರಂಭವಾಗಲಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಲಯ ವ್ಯಾಪ್ತಿಯ ಒಟ್ಟು 98 ಸ್ವತ್ತುಗಳನ್ನು ಕಾಯ್ದೆ ಹಾಗೂ ನಿಯಮಗಳನ್ವಯ ಜಯನಗರ 2ನೇ ಬ್ಲಾಕ್‌ನಲ್ಲಿರುವ ಸಭಾಂಗಣದಲ್ಲಿ ಹರಾಜು ಹಾಕುವ ಪ್ರಕ್ರಿಯೆ ಮಂಗಳವಾರದಿಂದ ನಡೆಯಲಿದೆ. ಈ ಆಸ್ತಿಗಳಿಂದ ₹15586841 ತೆರಿಗೆ ಬಾಕಿ ಇದೆ. ಈ ಎಲ್ಲ ವಿವರಗಳನ್ನು ಈಗಾಗಲೇ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆಯ ಕಂದಾಯ ವಿಭಾಗದ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.