ಬೆಂಗಳೂರು: ದೇಶದ ಪ್ರಧಾನಿಯಾಗಿ ಇಂದಿರಾ ಗಾಂಧಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಹಲವು ಬಿಕ್ಕಟ್ಟು ಹಾಗೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿತ್ತು ಎಂದು ಲೇಖಕ ಪೀಟರ್ ರೋನಾಲ್ಡ್ ಡಿಸೋಜಾ ಹೇಳಿದರು.
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ‘50 ಇಯರ್ಸ್ ಆಫ್ ದಿ ಇಂಡಿಯನ್ ಎರ್ಮೆಜೆನ್ಸಿ’ ಎಂಬ ಪುಸ್ತಕ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದರು.
‘ಆರ್ಥಿಕ, ರಾಜಕೀಯ ಬಿಕ್ಟಟ್ಟಿನ ಜತೆಗೆ ಬಡತನ, ನಿರುದ್ಯೋಗ, ಅನಕ್ಷರತೆ ಸೇರಿ ಹಲವು ಸಮಸ್ಯೆಗಳಿದ್ದವು. ಎಲ್ಲ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ಪರಿಹರಿಸಲು ಪ್ರಯತ್ನಿಸಿದರು. ಪುತ್ರ ಸಂಜಯ್ ಗಾಂಧಿ ಹೊರತುಪಡಿಸಿ ಯಾರನ್ನೂ ಅವರು ಹೆಚ್ಚು ನಂಬುತ್ತಿರಲಿಲ್ಲ. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಹಲವು ನಾಯಕರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯಿತು. ನಂತರ ನಡೆದ ಬೆಳವಣಿಗೆಯಲ್ಲಿ ಇಂದಿರಾ ಅವರು ಯಾರ ಸಲಹೆಯನ್ನು ಪಡೆಯದೇ ತುರ್ತು ಪರಿಸ್ಥಿತಿಯನ್ನು ಹಿಂದಕ್ಕೆ ಪಡೆದು ಅಚ್ಚರಿ ಮೂಡಿಸಿದ್ದರು’ ಎಂದು ತಿಳಿಸಿದರು.
‘ವಿರೋಧ ಪಕ್ಷದ ನಾಯಕರಿಗೆ ಪ್ರಚಾರ ಮಾಡಲು ಅವಕಾಶ ನೀಡಿದರು. ತಾನು ಸೋಲುವುದು ಖಚಿತ ಎಂಬುದು ಅವರಿಗೂ ಗೊತ್ತಿತ್ತು. ಇಂದಿರಾ ಗಾಂಧಿ ಧೈರ್ಯವಂತೆ, ಬಿಕ್ಕಟ್ಟು ಉಂಟಾದಾಗ ಎದೆಗುಂದುತ್ತಿರಲಿಲ್ಲ’ ಎಂದರು.
ಇತಿಹಾಸಕಾರರಾದ ಜಾನಕಿ ನಾಯರ್ ಮಾತನಾಡಿ, ‘ಬಡತನ ನಿರ್ಮೂಲನೆ ಸೇರಿ ಹಲವು ಭರವಸೆಗಳನ್ನು ಈಡೇರಿಸುವುದಾಗಿ ಇಂದಿರಾ ಆಶ್ವಾಸನೆ ನೀಡಿದ್ದರು. ತುರ್ತು ಪರಿಸ್ಥಿತಿ ವಿರೋಧಿಸಿ ರೈತರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ದಲಿತ ಸಂಘರ್ಷ ಸಮಿತಿ ಮುಂಚೂಣಿಗೆ ಬಂತು’ ಎಂದು ವಿವರಿಸಿದರು.
ಸಹ ಪ್ರಾಧ್ಯಾಪಕಿ ರಿಂಕು ಲಾಂಬಾ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರ ಬಗ್ಗೆ ಜನರು ತಿಳಿದುಕೊಳ್ಳಬೇಕು. ಯಾವುದೇ ವಿಚಾರದ ಕುರಿತು ಪ್ರಶ್ನಿಸಿ, ತಿಳಿದುಕೊಳ್ಳಲು ಅವಕಾಶ ಇದೆ’ ಎಂದರು.
ಪ್ರಾಧ್ಯಾಪಕ ಚಂದನ್ ಗೌಡ ಮಾತನಾಡಿದರು. ಥಾಮಸ್ ಅಬ್ರಹಾಂ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.