ಬೆಂಗಳೂರು: ವೈರಾಣು ಸೋಂಕುಗಳ ಪತ್ತೆಗೆ ನಡೆಸುವ ‘ಇನ್‌ಫ್ಲ್ಯೂಯೆಂಜಾ ಪ್ಯಾನೆಲ್’ ಪರೀಕ್ಷೆಗೆ ₹1,700 ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಕೆಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಪ್ರಯೋಗಾಲಯಗಳು ಸಾಮಾನ್ಯ ಜ್ವರಕ್ಕೂ ಗಂಟಲ ದ್ರವದ ಮಾದರಿಗಳನ್ನು ಪಡೆದು, ‘ಇನ್‌ಫ್ಲ್ಯೂಯೆಂಜಾ ಪ್ಯಾನೆಲ್’ ಕಿಟ್‌ಗಳನ್ನು ಬಳಸಿ ಪರೀಕ್ಷೆ ನಡೆಸಿರುವುದು ಗಮನಕ್ಕೆ ಬಂದಿದೆ. ಈ ರೀತಿ ಪರೀಕ್ಷೆಗಳಿಗೆ ₹8 ಸಾವಿರದಿಂದ ₹10 ಸಾವಿರದವರೆಗೆ ಪಡೆಯಲಾಗಿದೆ. ಆದ್ದರಿಂದ ಆರೋಗ್ಯ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಈ ಪರೀಕ್ಷೆಗೆ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು, ಕೋವಿಡ್ ಸೇರಿ ಯಾವುದೇ ರೀತಿಯ ವೈರಾಣು ಸೋಂಕು ಪತ್ತೆಗೆ ನಡೆಸುವ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರ ಅನ್ವಯವಾಗಲಿದೆ.
ನಿಗದಿಪಡಿಸಿದ ದರಕ್ಕಿಂತ ಅಧಿಕ ಹಣ ಪಡೆದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಕ್ರಮ ಕೈಗೊಳ್ಳಲಾಗುತ್ತದೆ. ಸಾರಿ (ತೀವ್ರ ಉಸಿರಾಟದ ಸಮಸ್ಯೆ), ಐಎಲ್‌ಐ (ಶೀತಜ್ವರ ಮಾದರಿ ಅನಾರೋಗ್ಯ ಸಮಸ್ಯೆ) ಪ್ರಕರಣಗಳನ್ನು ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ (ಐಎಚ್‌ಐಪಿ) ಕಡ್ಡಾಯವಾಗಿ ವೈದ್ಯಕೀಯ ಸಂಸ್ಥೆಗಳು ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.