ADVERTISEMENT

ರೀಲ್ಸ್ ಪ್ರಕರಣ: ಪೊಲೀಸ್ ಕಸ್ಟಡಿಗೆ ರಜತ್‌, ವಿನಯ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 14:22 IST
Last Updated 26 ಮಾರ್ಚ್ 2025, 14:22 IST
ವಿನಯ್‌ ಗೌಡ ಹಾಗೂ ರಜತ್‌  ಕಿಶನ್‌ 
ವಿನಯ್‌ ಗೌಡ ಹಾಗೂ ರಜತ್‌  ಕಿಶನ್‌    

ಬೆಂಗಳೂರು: ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಕಿರುತೆರೆಯ ನಟರಾದ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಸವೇಶ್ವರನಗರ ಠಾಣೆಯ ಪೊಲೀಸರು, ಬುಧವಾರ ತಮ್ಮ ಕಸ್ಟಡಿಗೆ ಪಡೆದುಕೊಂಡರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಬುಧವಾರ ಮಧ್ಯಾಹ್ನ ಪೊಲೀಸರು ಹಾಜರು ಪಡಿಸಿದರು.

ಪ್ರಾಸಿಕ್ಯೂಷನ್‌ ಪರವಾಗಿ ವಕೀಲ ಹರೀಶ್ ಚಂದ್ರಗೌಡ ಅವರು ವಾದ ಮಂಡನೆ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದ್ದು, ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ಕೋರಿದರು. ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದರು.

ADVERTISEMENT

‘ಮಾರಕಾಸ್ತ್ರ ಹಿಡಿದು, ರೀಲ್ಸ್ ಮಾಡಿ ವಿಡಿಯೊವನ್ನು ಇನ್‌ಸ್ಟಾಗ್ರಾಂನ ‘ಬುಜ್ಜಿ’ ಹೆಸರಿನ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದರು. ಅದರ ಮಾಹಿತಿ ತಿಳಿದು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಆಗ ಆರೋಪಿಗಳು ಫೈಬರ್‌ ಮಚ್ಚು ನೀಡಿದ್ದರು. ಪರಿಶೀಲನೆ ನಡೆಸಿದಾಗ ರೀಲ್ಸ್​ನಲ್ಲಿ ಬಳಸಿದ ಮಚ್ಚು ಅದಲ್ಲ ಎಂಬುದು ಪತ್ತೆ ಆಯಿತು. ಸಾಕ್ಷ್ಯ ನಾಶ ಪಡಿಸಿದ್ದ ಆರೋಪದ ಮೇರೆಗೆ, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಮತ್ತೆ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚನ್ನು ಎಲ್ಲಿ ವಿಲೇವಾರಿ ಮಾಡಲಾಗಿದೆ ಎಂಬುದರ ಕುರಿತು ಆರೋಪಿಗಳಿಂದ ಮಾಹಿತಿ ಪಡೆಯಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.