ADVERTISEMENT

ಹಣವಿದ್ದರೆ ಎಲ್ಲರೂ ನೆಂಟರೇ, ಇಲ್ಲದಿದ್ದರೆ ಯಾರೂ ಇಲ್ಲ; ಜಾಗೃತರಾಗಿರಿ: ಸಚಿವ ಸಲಹೆ

ವಿಮಾ ಪರಿಹಾರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 13:55 IST
Last Updated 25 ಜುಲೈ 2025, 13:55 IST
<div class="paragraphs"><p>ಅನುಕಂಪದ ಆಧಾರದ ಮೇಲೆ ನೇಮಕಗೊಂಡ 45 ಅಭ್ಯರ್ಥಿಗಳಿಗೆ ರಾಮಲಿಂಗಾರೆಡ್ಡಿ ಶುಕ್ರವಾರ&nbsp;ನೇಮಕಾತಿ ಆದೇಶ ಪತ್ರ ವಿತರಿಸಿದರು. ಪ್ರಜಾವಾಣಿ ಚಿತ್ರ&nbsp;</p></div>

ಅನುಕಂಪದ ಆಧಾರದ ಮೇಲೆ ನೇಮಕಗೊಂಡ 45 ಅಭ್ಯರ್ಥಿಗಳಿಗೆ ರಾಮಲಿಂಗಾರೆಡ್ಡಿ ಶುಕ್ರವಾರ ನೇಮಕಾತಿ ಆದೇಶ ಪತ್ರ ವಿತರಿಸಿದರು. ಪ್ರಜಾವಾಣಿ ಚಿತ್ರ 

   

ಬೆಂಗಳೂರು: ‘ಹಣವಿದ್ದರೆ ಎಲ್ಲರೂ ನೆಂಟರೇ. ಹಣ ಖಾಲಿಯಾದ ಮೇಲೆ ಯಾರೂ ಇರುವುದಿಲ್ಲ. ಹಾಗಾಗಿ ವಿಮಾ ಪರಿಹಾರವನ್ನು ಪಡೆದವರು ಈ ಬಗ್ಗೆ ಎಚ್ಚರಿಕೆಯಿಂದ ಹಣವನ್ನು ಸದ್ಬಳಕೆ ಮಾಡಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.

ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ₹ 1 ಕೋಟಿ, ಇತರೆ ಕಾರಣದಿಂದ ಮೃತಪಟ್ಟ 26 ಸಿಬ್ಬಂದಿಯ ಅವಲಂಬಿತರಿಗೆ ತಲಾ ₹ 10 ಲಕ್ಷ ವಿಮಾ ಪರಿಹಾರ, ಅನುಕಂಪದ ಆಧಾರದಲ್ಲಿ ನೇಮಕಗೊಂಡ 45 ಸಿಬ್ಬಂದಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. 

ADVERTISEMENT

ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಮುಂತಾದ ಅಗತ್ಯ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಬಡ್ಡಿಯ ವ್ಯಾಮೋಹಕ್ಕೆ ಒಳಗಾಗಿ ಯಾರಿಗೋ ಹಣ ನೀಡಿ ಕಳೆದುಕೊಳ್ಳಬೇಡಿ ಎಂದರು.

ನಿಗಮಗಳಲ್ಲಿ ಅನುಕಂಪದ ಆಧಾರದ ನೇಮಕಾತಿ 10 ವರ್ಷಗಳಿಂದ ಸ್ಥಗಿತಗೊಂಡಿತ್ತು. ಈ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿ ಕಳೆದ ಒಂದು ವರ್ಷದಲ್ಲಿ 271 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ನಾಲ್ಕು ನಿಗಮಗಳಲ್ಲಿ ಒಟ್ಟು 1,000 ಮಂದಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ  ಅಕ್ರಂ ಪಾಷ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌ ಆರ್‌., ಎನ್‌ಡಬ್ಲ್ಯುಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಸುಶೀಲಾ ಬಿ. ಉಪಸ್ಥಿತರಿದ್ದರು.

ಐರಾವತ ಕ್ಲಬ್‌ ಕ್ಲಾಸ್‌ ಬಸ್‌ಗೆ ಚಾಲನೆ
20 ವೋಲ್ವೊ ಐರಾವತ ಕ್ಲಬ್‌ಕ್ಲಾಸ್‌–2.0 ಬಸ್‌ಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಐದು ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬೆಂಗಳೂರು–ತಿರುಪತಿ ನಡುವೆ 1 ಮಂಗಳೂರು–ಬೆಂಗಳೂರು ಮಾರ್ಗದಲ್ಲಿ 2 ಮೈಸೂರು–ಮಂತ್ರಾಲಯ ಮಾರ್ಗದಲ್ಲಿ 2 ಬಸ್‌ಗಳು ಸಂಚರಿಸಲಿವೆ.

ಬಿಎಂಟಿಸಿ ಸಿಬ್ಬಂದಿಗೆ ₹1 ಕೋಟಿ ವಿಮೆ

ಸಿಬ್ಬಂದಿ ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಲು ಬ್ಯಾಂಕ್‌ ಆಫ್‌ ಬರೋಡ ಜೊತೆಗೆ ಬಿಎಂಟಿಸಿ ಒಡಂಬಡಿಕೆ ಮಾಡಿಕೊಂಡಿದೆ.

ಕರ್ತವ್ಯ ನಿರ್ವಹಣೆ ವೇಳೆ ಅಪಘಾತದಿಂದ ಮರಣ ಹೊಂದಿದರೆ ₹ 1.25 ಕೋಟಿ, ಬೇರೆ ಸಮಯದಲ್ಲಿ ಅಪಘಾತದಿಂದ ಮೃತಪಟ್ಟರೆ ₹1 ಕೋಟಿ, ವಿಮಾನ ಅಪಘಾತದಲ್ಲಿ ಮೃತಪಟ್ಟರೆ ₹1 ಕೋಟಿ, ಶಾಶ್ವತ ಪೂರ್ಣ ಅಂಗವೈಕಲ್ಯ ಉಂಟಾದರೆ ₹1 ಕೋಟಿ, ಶಾಶ್ವತವಾಗಿ ಭಾಗಶಃ ಅಂಗವೈಕಲ್ಯ ಉಂಟಾದರೆ ₹ 75 ಲಕ್ಷ ಹಾಗೂ ಸ್ವಾಭಾವಿಕ ಮರಣ ಉಂಟಾದರೆ ₹ 10 ಲಕ್ಷ ವಿಮಾ ಪರಿಹಾರ ದೊರೆಯಲಿದೆ. ಐದು ವರ್ಷಗಳ ಅವಧಿಯ ಒಪ್ಪಂದಕ್ಕೆ ಎರಡು ಸಂಸ್ಥೆಗಳು ಸಹಿ ಹಾಕಿದವು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬ್ಯಾಂಕ್ ಆಫ್ ಬರೋಡದ ಪ್ರಧಾನ ಮಹಾಪ್ರಬಂಧಕ ಮನೋಜ್ ಚಾಯಾಣಿ ಒಡಂಬಡಿಕೆಯ ಪತ್ರ ವಿನಿಮಯ ಮಾಡಿಕೊಂಡರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಬ್ಯಾಂಕ್ ಆಫ್ ಬರೋಡದ ಉಪ ಮಹಾಪ್ರಬಂಧಕರಾದ ಶೈಲೆಂದ್ರಕುಮಾರ ಸಿಂಗ್ ಸುಮಿತ್ ಕುಮಾರ್ ಮಿಶ್ರಾ ವೆಂಕಟ್ರಮಣಿ ಶ್ರೀಪೂರ್ಣಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.