ಉದ್ದೇಶಿತ ಅಂತರರಾಷ್ಟ್ರೀಯ ಕ್ರೀಡಾಂಗಣದ ನೀಲನಕ್ಷೆ
ಬೆಂಗಳೂರು: ಸೂರ್ಯನಗರದ ನಾಲ್ಕನೇ ಹಂತದಲ್ಲಿ (ಇಂಡಲವಾಡಿ) 80 ಸಾವಿರ ಆಸನಗಳ ಸಾಮರ್ಥ್ಯವಿರುವ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣ ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಸ್ಟೇಡಿಯಂ ನಿರ್ಮಾಣ ಸಂಬಂಧ ಗೃಹ ಮಂಡಳಿ ಸಿದ್ಧಪಡಿಸಿರುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಳೆದ ಜೂನ್‌ನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ, ನಗರದ ಹೊರ ಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಉತ್ಸುಕವಾಗಿದೆ. ಗೃಹ ಮಂಡಳಿಯು ಈಗಾಗಲೇ ಲಭ್ಯವಿರುವ 75 ಎಕರೆ ಜಾಗದಲ್ಲಿ 50 ಸಾವಿರ ಆಸನಗಳ ಸಾಮರ್ಥ್ಯವುಳ್ಳ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಮುಖ್ಯಮಂತ್ರಿ ಅವರು ಇನ್ನೂ 25 ಎಕರೆ ಜಾಗವನ್ನು ಪಡೆದು ಒಟ್ಟು ಆಸನಗಳ ಸಾಮರ್ಥ್ಯವನ್ನು 80 ಸಾವಿರಕ್ಕೆ ಹೆಚ್ಚಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದ ನಗರವಾಗಿದ್ದು, ಕ್ರಿಕೆಟ್ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆಸನಗಳ ಸಂಖ್ಯೆ ಹೆಚ್ಚಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಈಚೆಗೆ ನಡೆದ ಸಭೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಪರಿಷ್ಕರಿಸಿದ, ವಿಸ್ತೃತವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಂಪುಟಕ್ಕೆ ಕಳುಹಿಸಲು ಮಂಡಳಿಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಕ್ರೀಡಾಂಗಣ ನಿರ್ಮಾಣದ ಜವಾಬ್ದಾರಿಯನ್ನು ಗೃಹ ಮಂಡಳಿವಹಿಸಿಕೊಳ್ಳಲಿದೆ. ಸುಮಾರು ₹2 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಮಂಡಳಿಯೇ ಭರಿಸಲಿದ್ದು, ನಿರ್ಮಾಣದ ನಂತರ ಬರುವ ಆದಾಯ ಮಂಡಳಿಗೆ ಹೋಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಭಾರತದಲ್ಲಿ ಅತಿ ದೊಡ್ಡದಾಗಿದ್ದು, ಒಟ್ಟು 1,10,000 ಆಸನಗಳ ಸಾಮರ್ಥ್ಯ ಹೊಂದಿದೆ. ಸೂರ್ಯನಗರದಲ್ಲಿ ನಿರ್ಮಾಣವಾಗುವುದು ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. ಸದ್ಯ ನಗರದಲ್ಲಿ ಇರುವ ಚಿನ್ನಸ್ವಾಮಿ ಕ್ರೀಡಾಂಗಣ 36,000 ಆಸನಗಳ ಸಾಮರ್ಥ್ಯ ಹೊಂದಿದೆ.
‘ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಮಾತುಕತೆ ನಡೆಸಿ, ಆ ಸಂಸ್ಥೆಗಳ ಸಲಹೆಗಳನ್ನು ಪಡೆಯಲಿದ್ದೇವೆ. ಮುಂದೆ ಯಾವುದೇ ರೀತಿಯ ತೊಂದರೆಗಳು ಬರಬಾರದು. ಹೀಗಾಗಿ ಅಗತ್ಯ ಸಿದ್ಧತೆ, ಎಲ್ಲರ ಅಭಿಪ್ರಾಯಗಳನ್ನು ಪಡೆದ ನಂತರವೇ ಇದಕ್ಕೆ ಅಂತಿಮ ರೂಪ ನೀಡಲಾಗುತ್ತದೆ’ ಎಂದು ಗೃಹ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಉದ್ದೇಶಿತ ಅಂತರರಾಷ್ಟ್ರೀಯ ಸ್ಟೇಡಿಯಂಗೆ ಇರುವ ಅಂತರ
47.9 ಕಿ.ಮೀ.: ಕೆಂಪೇಗೌಡ ಬಸ್ ನಿಲ್ದಾಣದಿಂದ
72.2 ಕಿ.ಮೀ.: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ
11.2 ಕಿ.ಮೀ.: ಆನೇಕಲ್ ರೈಲು ನಿಲ್ದಾಣದಿಂದ
18.4 ಕಿ.ಮೀ.: ಬೊಮ್ಮಸಂದ್ರ ಮೆಟ್ರೊ ನಿಲ್ದಾಣದಿಂದ
ಏನೆಲ್ಲ ಇರಲಿದೆ..
ಆಟಗಾರರು, ತರಬೇತಿದಾರರಿಗೆ ವಸತಿ
ವೈದ್ಯಕೀಯ ಕೇಂದ್ರ
ಕ್ರೀಡಾ ವಿಜ್ಞಾನ ಕೇಂದ್ರ
ಫಿಟ್ನೆಸ್ ಸೆಂಟರ್
ಪೌಷ್ಟಿಕಾಂಶ ಕೇಂದ್ರ
ಫಿಸಿಯೊಥೆರಪಿ ಕೇಂದ್ರ
ಹೈಡ್ರೊಥೆರಪಿ ಕೇಂದ್ರ
ಈಜುಕೊಳ
ಸಭಾಂಗಣ
ರೆಸ್ಟೋರೆಂಟ್
ಪ್ರದರ್ಶನ ಕೇಂದ್ರ
ಕ್ರೀಡಾ ಮಳಿಗೆಗಳು
ಮಾರಾಟ ಮಳಿಗೆಗಳು
ಸಮಾವೇಶ ಸಭಾಂಗಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.