ADVERTISEMENT

ಪರಿಸರ ಕಾಳಜಿಯೇ ಇವರ ‘ಉಸಿರು’

ಸ್ವಚ್ಛತೆಯ ಕಾಳಜಿ ಬೆಳೆಸಲು ಪಣತೊಟ್ಟ ಶೋಭಾ– ಲಕ್ಷಕ್ಕೂ ಹೆಚ್ಚು ಚಿಣ್ಣರಿಗೆ ಪರಿಸರ ಪಾಠ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 22:19 IST
Last Updated 7 ಮಾರ್ಚ್ 2020, 22:19 IST
ವಿದ್ಯಾರ್ಥಿಗಳಿಗೆ ಕಸ ವಿಂಗಡಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿರುವ ಶೋಭಾ ಭಟ್‌
ವಿದ್ಯಾರ್ಥಿಗಳಿಗೆ ಕಸ ವಿಂಗಡಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿರುವ ಶೋಭಾ ಭಟ್‌   

ಬೆಂಗಳೂರು: ಬೀದಿ ಬದಿಯಲ್ಲಿ ಕಸ ರಾಶಿ ಬಿದ್ದು ಗಬ್ಬು ನಾರುತ್ತಿದ್ದರೂ ತಮಗೂ ಅದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುವವರೇ ಹೆಚ್ಚು. ಆದರೆ, ರಾಜರಾಜೇಶ್ವರಿನಗರದ ಶೋಭಾ ಹಾಗಲ್ಲ. ಮನೆಯ ಮಾತ್ರವಲ್ಲ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದರ ಮಹತ್ವವನ್ನು ಸಾರುತ್ತಿದ್ದಾರೆ.

ಚಿಣ್ಣರಲ್ಲಿ ಪರಿಸರ ಕಾಳಜಿ ಬೆಳೆಸುತ್ತಿರುವ ಅವರು ಈ ಸಲುವಾಗಿಯೇ ‘ಉಸಿರು’ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ. ಕಸ ವಿಂಗಡಣೆ, ಪ್ಲಾಸ್ಟಿಕ್‌ ನಿಷೇಧ, ಬಿಬಿಎಂಪಿ ನೀರು ಉಳಿಸುವುದು, ಹಬ್ಬದ ಸಂದರ್ಭದಲ್ಲಿ ಮಣ್ಣಿನ ಮೂರ್ತಿಗಳನ್ನು ಬಳಸುವ ಮಹತ್ವ ಸಾರುವ ಕಾರ್ಯಕ್ರಮಗಳನ್ನು ಈ ಸಂಸ್ಥೆ ಮೂಲಕ ಹಮ್ಮಿಕೊಳ್ಳುತ್ತಿದ್ದಾರೆ.

ಗೃಹಿಣಿಯಾಗಿ ಮನೆಯ ನಿರ್ವಹಣೆಯ ಜತೆಗೆ ವಾರದಲ್ಲಿ ಕನಿಷ್ಠ ಮೂರು ಕಡೆಯಾದರೂ ಪ್ರಾತ್ಯಕ್ಷಿಕೆ ನೀಡುತ್ತಾರೆ. ಶಾಲಾ ಕಾಲೇಜುಗಳಲ್ಲೂ ಕಾರ್ಯಕ್ರಮ ನೀಡುತ್ತಿದ್ದಾರೆ. 10 ವರ್ಷಗಳಲ್ಲಿ ಹೆಚ್ಚೂ ಕಡಿಮೆ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಸ ನಿರ್ವಹಣೆ ಹಾಗೂ ಪರಿಸರ ಕಾಳಜಿಯ ಮಹತ್ವ ತಿಳಿಸಿದ್ದಾರೆ. ಬಿಬಿಎಂಪಿಯ ಮಾಸ್ಟರ್‌ ಟ್ರೈನಿಂಗ್‌ ತರಬೇತಿಗಳಲ್ಲೂ ಶೋಭಾ ಅವರು ಕೈ ಜೋಡಿಸುತ್ತಾರೆ. ಸ್ವಚ್ಛ ಸರ್ವೇಕ್ಷಣೆ ಬಗ್ಗೆಯೂ ಅನೇಕ ಕಾರ್ಯಕ್ರಮ ನಡೆಸಿದ್ದಾರೆ.

ADVERTISEMENT

‘ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲವಿತ್ತು. ಈ ಸಲುವಾಗಿ10 ವರ್ಷಗಳ ಹಿಂದೆ ಜ್ಞಾನಭಾರತಿ ವಾರ್ಡ್‌ನಲ್ಲಿ ಜನರನ್ನು ಸೇರಿಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಆರಂಭಿಸಿದೆ. ಬಳಿಕ ಈ ಸಲುವಾಗಿ ‘ಉಸಿರು’ ಸಂಸ್ಥೆ ಹುಟ್ಟುಹಾಕಿದೆ’ ಎಂದು ಶೋಭಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಣ್ಣರಲ್ಲಿ ಪರಿಸರ ಕಾಳಜಿ ಮೂಡಿಸಿದರೆ ಭವಿಷ್ಯದಲ್ಲಾದರೂ ಪರಿಸ್ಥಿತಿ ಸರಿ ಹೋಗಬಹುದು. ಮಕ್ಕಳು ಪರಿಸರದ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. 100 ಮಂದಿಯಲ್ಲಿ 10 ಮಂದಿ ನಾನು ಹೇಳಿದ ವಿಷಯ ಪಾಲಿಸಿದರೂ ಅದರಿಂದ ಪ್ರಯೋಜನವಾಗುತ್ತದೆ’ ಎನ್ನುತ್ತಾರೆ ಶೋಭಾ.

‘ಏನನ್ನು ಹೇಳುತ್ತೇನೋ ಅದನ್ನು ಮೊದಲು ನಾನೇ ಪಾಲಿಸುತ್ತೇನೆ. ನಮ್ಮ ಮನೆಯ ಕಸ ಹೊರಗೆ ಹೋಗುವುದಿಲ್ಲ. ಎಲ್ಲವನ್ನೂ ಕಾಂಪೋಸ್ಟ್‌ ಮಾಡುತ್ತೇನೆ. ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಮುನ್ನವೇ ನಾವು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.

ಕೆರೆ ಉಳಿಸಲು ಪಣ
ಶ್ರೀಗಂಧ ಕಾವಲ್‌ ಕೆರೆಯ ಸಂರಕ್ಷಣೆ ಬಗ್ಗೆಯೂ ಶೋಭಾ ಹೋರಾಟ ನಡೆಸಿದ್ದಾರೆ.

‘ಮೂರು ವರ್ಷಗಳ ಹಿಂದೆ ವಾರ್ಡ್‌ನ ಕಸವನ್ನೆಲ್ಲ ಈ ಕೆರೆಗೆ ಹಾಕುತ್ತಿದ್ದರು. ಕಟ್ಟಡದ ಅವಶೇಷಗಳನ್ನು ಸುರಿಯುತ್ತಿದ್ದರು. ಇದಕ್ಕೆಲ್ಲ ಕಡಿವಾಣ ಹಾಕಿದ್ದೇವೆ. ಈ ಕೆರೆ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ’ ಎಂದು ಶೋಭಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.