ADVERTISEMENT

ಐಪಿಎಲ್‌: ಬೆಂಗಳೂರು ಮ್ಯಾಚ್ ವೇಳೆ ನಮ್ಮ ಮೆಟ್ರೊ ಸಂಚಾರ ಅವಧಿ ವಿಸ್ತರಣೆ

ಪಂದ್ಯದ ದಿನಗಳಲ್ಲಿ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಮಧ್ಯಾಹ್ನ 2ರಿಂದ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ ₹ 50ಕ್ಕೆ ಮಾರಾಟಕ್ಕೆ ಲಭ್ಯವಿದೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 14:56 IST
Last Updated 12 ಏಪ್ರಿಲ್ 2024, 14:56 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಕ್ರಿಕೆಟ್‌ ನಡೆಯುವ ದಿನಗಳಲ್ಲಿ ‘ನಮ್ಮ ಮೆಟ್ರೊ’ ಸಂಚಾರ ಅವಧಿಯನ್ನು ರಾತ್ರಿ ಅರ್ಧ ಗಂಟೆ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಏಪ್ರಿಲ್‌ 15, ಮೇ 4, 12 ಮತ್ತು ಮೇ 18ರಂದು ಐಪಿಎಲ್‌ ಪಂದ್ಯಗಳು ನಡೆಯಲಿವೆ. ಅಂದು ರಾತ್ರಿ 11.30ಕ್ಕೆ ಮೆಟ್ರೊ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳ ನಾಲ್ಕು ಟರ್ಮಿನಲ್‌ಗಳಿಂದ ಕೊನೆಯ ಮೆಟ್ರೊ ರೈಲುಗಳು ಹೊರಡಲಿವೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳ ಕಡೆಗೆ ರಾತ್ರಿ 12ಕ್ಕೆ ರೈಲುಗಳು ಹೊರಡಲಿವೆ. ಪಂದ್ಯ ಮುಗಿಯುವುದು ತಡವಾದರೆ ಮೆಜೆಸ್ಟಿಕ್‌ನಿಂದ ಹೊರಡುವ ಕೊನೆಯ ರೈಲಿನ ಅವಧಿಯನ್ನು ರಾತ್ರಿ 12.15ರವರೆಗೂ ವಿಸ್ತರಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಕೊನೆಯ ರೈಲುಗಳು ನಾಲ್ಕು ಟರ್ಮಿನಲ್‌ಗಳಿಂದ ರಾತ್ರಿ 11ಕ್ಕೆ ಹಾಗೂ ಮೆಜೆಸ್ಟಿಕ್‌ನಿಂದ ರಾತ್ರಿ 11.30ಕ್ಕೆ ಟರ್ಮಿನಲ್‌ಗಳ ಕಡೆಗೆ ಸಂಚರಿಸುತ್ತಿದ್ದವು. 

ADVERTISEMENT

ಪಂದ್ಯದ ದಿನಗಳಲ್ಲಿ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಮಧ್ಯಾಹ್ನ 2ರಿಂದ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ ₹ 50ಕ್ಕೆ ಮಾರಾಟಕ್ಕೆ ಲಭ್ಯವಿದೆ. ಟಿಕೆಟ್ ಖರೀದಿ ಮಾಡಿದ ದಿನ ಕಬ್ಬನ್‌ ಪಾರ್ಕ್‌ ಮತ್ತು ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ಒಂದು ಬಾರಿ ಚಲಿಸಲು ರಾತ್ರಿ 8ರಿಂದ ಮಾನ್ಯವಾಗಿರುತ್ತದೆ. ಎಂದಿನಂತೆ ಕ್ಯೂಆರ್‌ ಕೋಡ್ ಟಿಕೆಟ್‌, ಸ್ಮಾರ್ಟ್ ಕಾರ್ಡ್‌ ಮತ್ತು ಎನ್‌ಸಿಎಂಸಿ ಕಾರ್ಡ್‌ ಬಳಸಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.