ADVERTISEMENT

ವಾಹನದಲ್ಲಿ ಒಬ್ಬರೇ ಸಾಗುವಾಗ ಮಾಸ್ಕ್‌ ಧರಿಸುವುದು ಕಡ್ಡಾಯವೇ?: ಬಿಬಿಎಂಪಿ

ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ಕೋರಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 3:16 IST
Last Updated 27 ಆಗಸ್ಟ್ 2020, 3:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕಾರಿನಲ್ಲಿ ಅಥವಾ ದ್ವಿಚಕ್ರ ವಾಹನದಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್‌ ಧರಿಸುವುದು ಕಡ್ಡಾಯವೇ?

ಸಾರ್ವಜನಿಕರನ್ನು ಕಾಡುತ್ತಿರುವ ಇಂತಹ ಕೆಲವು ಗೊಂದಲಗಳ ಬಗ್ಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಆರೋಗ್ಯ ಇಲಾಖೆಯಿಂದ ಸ್ಪಷ್ಟೀಕರಣ ಕೋರಿದ್ದಾರೆ.

‘ಮಾಸ್ಕ್‌ ಧಾರಣೆ ಬಗ್ಗೆ ಕೆಲವು ಉದ್ಯಾನಗಳ ನಡಿಗೆದಾರರ ಸಂಘದವರು ಹಾಗೂ ಅನೇಕ ಸಾರ್ವಜನಿಕರು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಾರ್ವಜನಿಕರನ್ನು ಕಾಡುತ್ತಿರುವ ಐದು ವಿಚಾರಗಳ ಬಗ್ಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಅವರಿಗೆ ಪತ್ರ ಬರೆದು ಸ್ಪಷ್ಟೀಕರಣ ಕೋರಿದ್ದೇನೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಪ್ರಶ್ನೆಗಳಿಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡುವವರೆಗೂ ಕಾರುಗಳಲ್ಲಿ ಅಥವಾ ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸುವುದು ಕಡ್ಡಾಯ. ಜಾಗಿಂಗ್‌ ಮಾಡುವ ಸಂದರ್ಭದಲ್ಲೂ ಮಾಸ್ಕ್‌ ಧರಿಸಿರಲೇಬೇಕು’ ಎಂದು ಅವರು ತಿಳಿಸಿದರು.

ಬಿಬಿಎಂಪಿ ಸ್ಪಷ್ಟೀಕರಣ ಬಯಸಿರುವ ಪಂಚ ಪ್ರಶ್ನೆಗಳು

*ಕಾರಿನ ಎಲ್ಲ ಕಿಟಕಿಗಳ ಗಾಜುಗಳನ್ನು ಮುಚ್ಚಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್‌ ಧರಿಸುವುದು ಕಡ್ಡಾಯವೇ?

*ಕಾರಿನಲ್ಲಿ ಒಬ್ಬ ವ್ಯಕ್ತಿ ಪ್ರಯಾಣಿಸುವಾಗ ಅದರ ಕಿಟಕಿಗಳ ಗಾಜುಗಳನ್ನು ತೆರೆದಿದ್ದರೆ, ಅವರು ಮಾಸ್ಕ್‌ ಧರಿಸಬೇಕೇ. ಆ ಕಾರನ್ನು ವಾಹನ ನಿಲುಗಡೆ ತಾಣದ ಬಳಿ ಅಥವಾ ಸಂಚಾರ ಸಿಗ್ನಲ್‌ ಬಳಿ ನಿಲ್ಲಿಸಿ ಅನ್ಯ ವ್ಯಕ್ತಿ ಜೊತೆ ಮಾತನಾಡಲು ಕಿಟಕಿ ಗಾಜನ್ನು ಕೆಳಗೆ ಇಳಿಸಿದಾಗ ಮಾಸ್ಕ್‌ ಧರಿಸಿರಬೇಕೇ?

*ದ್ವಿಚಕ್ರ ವಾಹನದಲ್ಲಿ ಒಬ್ಬನೇ ವ್ಯಕ್ತಿ ಸಾಗುವಾಗ ಮಾಸ್ಕ್ ಧರಿಸುವುದು ಕಡ್ಡಾಯವೇ?

*ದ್ವಿಚಕ್ರ ವಾಹನದಲ್ಲಿ ಒಬ್ಬನೇ ವ್ಯಕ್ತಿ ಸಾಗುತ್ತಿದ್ದು, ವಾಹನವನ್ನು ನಿಲ್ಲಿಸಿದಾಗ ಆ ವ್ಯಕ್ತಿ ಮಾಸ್ಕ್‌ ಧರಿಸಬೇಕೇ?

*ಸಾರ್ವಜನಿಕ ಸ್ಥಳಗಳಲ್ಲಿ ಜಾಗಿಂಗ್‌ ಮಾಡುವವರಿಗೆ ಮಾಸ್ಕ್‌ ಧರಿಸುವುದರಿಂದ ವಿನಾಯಿತಿ ಇದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.