ADVERTISEMENT

ಐ.ಟಿ ದಾಳಿ | ಇಬ್ಬರು ಬಾಲಕಿಯರ ರಕ್ಷಣೆ: ಚಿನ್ನಾಭರಣ ವ್ಯಾಪಾರಿಗಳ ವಿರುದ್ಧ FIR

ಐ.ಟಿ ದಾಳಿ ವೇಳೆ ಪ್ರಕರಣ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 15:17 IST
Last Updated 18 ಡಿಸೆಂಬರ್ 2023, 15:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ತೆರಿಗೆ ವಂಚನೆ ಆರೋಪದಡಿ ಚಿನ್ನಾಭರಣ ವ್ಯಾಪಾರಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು, ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ಪೊಲೀಸರ ಸಹಾಯದಿಂದ ರಕ್ಷಿಸಿದ್ದಾರೆ.

ಬಾಲಕಿಯರನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದ ಆರೋಪದಡಿ ಅಶೋಕಕುಮಾರ್, ಶ್ರೇಯಾಂಸ್ ಚೌಧರಿ ಹಾಗೂ ಗೌರವ್ ಚೌಧರಿ ವಿರುದ್ಧ ಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಿಂದ ರಕ್ಷಿಸಲಾಗಿರುವ 10 ವರ್ಷ ಹಾಗೂ 8 ವರ್ಷ ವಯಸ್ಸಿನ ಇಬ್ಬರು ಬಾಲಕಿಯರನ್ನು ಸರ್ಕಾರಿ ಬಾಲ ಮಂದಿರದಲ್ಲಿ ಇರಿಸಲಾಗಿದೆ.

ADVERTISEMENT

ಪ್ರಕರಣದ ವಿವರ:

‘ತೆರಿಗೆ ವಂಚನೆ ಆರೋಪದಡಿ ನಗರದ ಹಲವು ಚಿನ್ನಾಭರಣ ವ್ಯಾಪಾರಿಗಳ ಮನೆ ಹಾಗೂ ಮಳಿಗೆಗಳ ಮೇಲೆ ಐ.ಟಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ಯಡಿಯೂರಿನಲ್ಲಿ ವಾಸವಿರುವ ವ್ಯಾಪಾರಿ ಅಶೋಕಕುಮಾರ್ ಮನೆಯಲ್ಲಿ ಇಬ್ಬರು ಬಾಲಕಿಯರು ಇರುವುದನ್ನು ಅಧಿಕಾರಿಗಳು ಗಮನಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಕ್ಕಳ ಬಗ್ಗೆ ಐ.ಟಿ ಅಧಿಕಾರಿಗಳು ವಿಚಾರಿಸಿದಾಗ, ಅವರು ಕೆಲಸಕ್ಕೆ ಇರುವುದು ಗೊತ್ತಾಗಿತ್ತು. ಅವಾಗಲೇ ಅಧಿಕಾರಿಗಳು, ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿದ್ದ ಪಿಎಸ್‌ಐ ನೇತೃತ್ವದ ತಂಡ, ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಾಲಕಿಯರು, ಬಿಹಾರದವರು ಎಂಬುದು ಗೊತ್ತಾಗಿದೆ. ಅವರ ತಂದೆ–ತಾಯಿ ಮೈಸೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಅಶೋಕಕುಮಾರ್, ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ತಮ್ಮ ಪತ್ನಿಯ ಆರೈಕೆಗೆಂದು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರೆಂಬುದು ಸದ್ಯಕ್ಕೆ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.