ಬೆಂಗಳೂರು: ‘ಕನ್ನಡ ಬೆಳೆಸಲು ಮಾತೃ ಹೃದಯವಿರಬೇಕು. ಮಾತೃ ಹೃದಯವು ಹಿಡಿತ ಸಾಧಸದೆ ಪ್ರೀತಿ ಹಂಚುತ್ತದೆ’ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.
ಕರ್ನಾಟಕ ವಿಕಾಸ ರಂಗ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿ ಜರಗನಹಳ್ಳಿ ಶಿವಶಂಕರ್ ಅವರ ಸ್ಮರಣಾರ್ಥ ನೀಡುವ ‘ನುಡಿಸಿರಿ ಪ್ರಶಸ್ತಿ’ಯನ್ನು ಮಾಸ್ಕೇರಿ ಎಂ.ಕೆ. ನಾಯಕ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
‘ಕನ್ನಡಿಗರು ಹೃದಯ ವೈಶಾಲ್ಯತೆ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿಯೇ ಎಲ್ಲರನ್ನೂ ಪ್ರೀತಿ, ಸ್ನೇಹದಿಂದ ಕಾಣುತ್ತಾರೆ. ಜರಗನಹಳ್ಳಿ ಶಿವಶಂಕರ್ ಅವರ ಸಾಹಿತ್ಯವು ಸ್ಫೂರ್ತಿದಾಯಕವಾಗಿದ್ದು, ಯುವ ಬರಹಗಾರರಿಗೆ ಪ್ರೇರಣೆಯಾಗಲಿದೆ’ ಎಂದು ಹೇಳಿದರು.
ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ‘ಕನ್ನಡಿಗರ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಅಷ್ಟಾಗಿ ಮನ್ನಣೆ ಸಿಗುತ್ತಿಲ್ಲ. ಅದೇ ಹಿಂದಿ ಸೇರಿ ವಿವಿಧ ಭಾಷಿಕರನ್ನು ಬೇಗ ಗುರುತಿಸಿ, ಗೌರವಿಸಲಾಗುತ್ತಿದೆ. ರಾಜ್ಯ ಸರ್ಕಾರವು ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುತ್ತೋಲೆಗಳನ್ನು ಹೊರಡಿಸಿದರೂ ಅದು ಅನುಷ್ಠಾನಕ್ಕೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ, ‘ಮಾಸ್ಕೇರಿ ಎಂ.ಕೆ. ನಾಯಕ ಅವರು ಬರೆದ ಕವನಗಳು ಜನರ ಮನಸ್ಸನ್ನು ಮುಟ್ಟಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಸ್ಕೇರಿ ಎಂ.ಕೆ. ನಾಯಕ, ‘ಜರಗನಹಳ್ಳಿ ಶಿವಶಂಕರ್ ಅವರು ವಿನಯವಂತರು. ವಿನಯಕ್ಕಿಂತ ಶೇಷ್ಠವಾದದ್ದು ಯಾವುದೂ ಇಲ್ಲ’ ಎಂದರು.
ನಾನು ನಮ್ಮವರೊಂದಿಗೆ ಫೌಂಡೇಷನ್‌ನ ಸಂಸ್ಥಾಪಕಿ ಸರ್ವಮಂಗಳ ಅರಳಿಮಟ್ಟಿ, ‘ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ಜರಗನಹಳ್ಳಿ ಶಿವಶಂಕರ್ ಅವರು ಯುವ ಲೇಖಕರಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.