ಬೆಂಗಳೂರು: ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ‘ಸುಹೃದ್’ ಆ್ಯಪ್ ಪರಿಚಯಿಸಿದೆ.
ಈ ಆ್ಯಪ್ ಅನ್ನು ಸಂಸ್ಥೆಯ ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪಾಶ್) ಅಭಿವೃದ್ಧಿಪಡಿಸಿದ್ದು, ಈಗಾಗಲೇ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಬಳಸಲಾರಂಭಿಸಿದ್ದಾರೆ. ‘ಸುಹೃದ್’ ಅಂದರೆ ಸಂಸ್ಕೃತದಲ್ಲಿ ‘ಒಳ್ಳೆಯ ಹೃದಯ’ ಎಂಬ ಅರ್ಥವಿದೆ. ಆದ್ದರಿಂದ ಆ್ಯಪ್‌ಗೆ ಈ ಹೆಸರು ಇಡಲಾಗಿದೆ.
ದೇಶದ ವಿವಿಧೆಡೆ ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸಂಸ್ಥೆಯು ಈ ಕ್ರಮ ಕೈಗೊಂಡಿದೆ. ‘ಶೇಕ್ ಟು ಸೇಫ್ಟಿ’ ಶೀರ್ಷಿಕೆಯಡಿ ಈ ಆ್ಯಪ್ ಪರಿಚಯಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಅನ್ನು ಮೂರು ಬಾರಿ ಅಲ್ಲಾಡಿಸಿದಲ್ಲಿ ಸಂದೇಶಗಳು ಸಂಸ್ಥೆಯ ನಿರ್ವಹಣಾ ಕೊಠಡಿ ಮೂಲಕ ರವಾನೆಯಾಗಲಿವೆ.
ಆ್ಯಪ್‌ನಲ್ಲಿ ತುರ್ತು ಸಹಾಯ (ಎಸ್‌ಒಎಸ್) ಬಟನ್ ಒತ್ತುವ ಆಯ್ಕೆಯನ್ನೂ ನೀಡಲಾಗಿದೆ. ಸ್ಮಾರ್ಟ್ ಫೋನ್ ಅಲ್ಲಾಡಿಸಿದಲ್ಲಿ ಅಥವಾ ಎಸ್‌ಒಎಸ್ ಆಯ್ಕೆ ಒಮ್ಮೆ ಒತ್ತಿದರೂ ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ನಿಗದಿತ ಸ್ಥಳ ಸಹಿತ ತುರ್ತು ಸಂದೇಶವು ಸಂಸ್ಥೆಯ ರಕ್ಷಣಾ ಸಿಬ್ಬಂದಿ, ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿಗೆ ರವಾನೆಯಾಗುತ್ತದೆ. ಇದರಿಂದ ಕೂಡಲೇ ನೆರವಿಗೆ ಧಾವಿಸಲು ಸಾಧ್ಯವಾಗುತ್ತದೆ.
ಜಯದೇವ ಹೃದ್ರೋಗ ಆಸ್ಪತ್ರೆಯು ಇಲ್ಲಿ ಒಟ್ಟು 1,050 ಹಾಸಿಗೆಗಳನ್ನು ಒಳಗೊಂಡಿದೆ. ಜಗತ್ತಿನ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವುದರಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ರೋಗಿಗಳು ಜಯದೇವದಲ್ಲಿ ಆ್ಯಂಜಿಯೊಗ್ರಾಮ್, ಆ್ಯಂಜಿಯೋಪ್ಲಾಸ್ಟಿ, ಪೇಸ್‌ಮೇಕರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಕ್ಯಾಥ್‌ಲ್ಯಾಬ್ ಪ್ರಕ್ರಿಯೆಗಳನ್ನು ನಡೆಸುವ ಆಸ್ಪತ್ರೆ ಇದಾಗಿದೆ.
‘ವೈದ್ಯರು ಹಾಗೂ ಸಿಬ್ಬಂದಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಆ್ಯಪ್ ಪರಿಚಯಿಸಲಾಗಿದೆ. ಸ್ಮಾರ್ಟ್ ಫೋನ್ ಅನ್ನು ಮೂರು ಬಾರಿ ಅಲ್ಲಾಡಿಸಿದರೆ ನಿರ್ವಹಣಾ ಕೊಠಡಿಗೆ ಸಂದೇಶ ರವಾನೆಯಾಗಲಿದೆ. ಈ ಕ್ರಮದಿಂದ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ’ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.