ADVERTISEMENT

ನನ್ನ ಬಳಿ ಸಿನಿಮಾ ಇದೆ: ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 14:22 IST
Last Updated 4 ಫೆಬ್ರುವರಿ 2026, 14:22 IST
ಜಯಂತ ಕಾಯ್ಕಿಣಿ ಅವರಿಗೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಸ್ಮರಣಿಕೆ ನೀಡಿದರು. 
ಜಯಂತ ಕಾಯ್ಕಿಣಿ ಅವರಿಗೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಸ್ಮರಣಿಕೆ ನೀಡಿದರು.    

ಬೆಂಗಳೂರು: ‘ನನ್ನನ್ನು ಬೇಷರತ್ ಲಾಲನೆ ಪಾಲನೆ ಮಾಡಿದ ಅಮ್ಮ ಈ ಸಿನಿಮಾ. ಹೀಗಾಗಿ ನನ್ನ ಬಳಿ ಏನಿದೆ ಎಂದು ಯಾರಾದರೂ ಕೇಳಿದರೆ ‘ನನ್ನ ಬಳಿ ಸಿನಿಮಾ ಇದೆ’ ಎನ್ನುತ್ತೇನೆ’ ಎಂದು ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.   

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಸೋಮವಾರ ನಡೆದ ಸಂವಾದದಲ್ಲಿ ಸಿನಿಮಾ ನಂಟಿನ ಕುರಿತು ಅವರು ಮಾತನಾಡಿದರು. 

‘ಗೋಕರ್ಣದಲ್ಲಿ ಟೂರಿಂಗ್‌ ಟಾಕೀಸ್‌ನಿಂದಾಗಿ ನನಗೆ ಸಿನಿಮಾ ಕುರಿತು ಆಸಕ್ತಿ ಹುಟ್ಟಿತ್ತು. ಸಿನಿಮಾದ ವಿಸ್ಮಯ ಪ್ರಪಂಚವನ್ನು ಬಾಲ್ಯದಲ್ಲೇ ನೋಡಿದ್ದೆ. ಸಿನಿಮಾ ಯಾವ ಸಂದರ್ಭದಲ್ಲೂ ನಮ್ಮ ಕೈಬಿಡುವುದಿಲ್ಲ. ಒಂದೇ ಸಿನಿಮಾ ನಿಮ್ಮನ್ನು ಬೇರೆ ಬೇರೆ ರೀತಿಯಲ್ಲಿ ಸಂತೈಸುತ್ತದೆ. ಅವುಗಳ ಸನ್ನಿವೇಶಗಳು ನಮ್ಮ ಜೀವನಕ್ಕೆ ನೇರವಾಗಿ ಸಂಬಂಧವಿರದೇ ಇದ್ದರೂ ನಮ್ಮ ಜೀವನದ ಘಟ್ಟಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಸಿನಿಮಾದ ಹಾಡುಗಳೂ ನಮ್ಮ ಮೇಲೆ ಪರಿಣಾಮ ಬೀರಿವೆ. ಹೀಗಾಗಿಯೇ ಸಿನಿಮಾ ಗೀತೆಗಳು ನಮ್ಮ ಜೀವನದ ಹಿನ್ನೆಲೆ‌‌ ಸಂಗೀತದಂತಿದೆ’ ಎಂದರು. 

ADVERTISEMENT

ಅನಿಸುತಿದೆ ಬರೆದದ್ದು 52ರಲ್ಲಿ!

‘ಸಿನಿಮಾ ಹಾಡು ಬರೆಯುವುದು ಸುಲಭ ಎಂದುಕೊಂಡಿದ್ದೆ. ಅದರ ಬಗ್ಗೆ ಉಡಾಫೆ ಇತ್ತು. ಆದರೆ ಅವುಗಳ ಕಷ್ಟ ಗೊತ್ತಾಗಿದ್ದೇ ಬರೆಯಲು ಕುಳಿತಾಗ. ಮೊದಲೇ ಸಿದ್ಧವಾಗಿರುವ ಟ್ಯೂನ್‌ಗೆ ಹಾಡು ಹೊಸೆಯಬೇಕು. ಅದೊಂದು ಸವಾಲು. ಅದಕ್ಕೊಂದು ಕೌಶಲ ಬೇಕು. ಭಾರತದಲ್ಲಿ‌ ಕೋಟ್ಯಂತರ ಹಾಡುಗಳಿವೆ. ಬೇರೆ ಯಾವ ದೇಶದಲ್ಲೂ ಇಷ್ಟು ಹಾಡುಗಳಿಲ್ಲ. ಯುದ್ಧದಲ್ಲೂ ಹಾಡು ಇತ್ತು. ಹಾಡಿನಲ್ಲಿ ಕಥೆಯ, ಪ್ರೀತಿಯ ಸ್ಥಿತ್ಯಂತರ ತೋರಿಸಬಹುದು. ಒಟ್ಟು ಹಾಡುಗಳ ಶೇ 70ರಷ್ಟು ಹಾಡುಗಳು ಪ್ರೀತಿ ಮೇಲಿವೆ. ಎಲ್ಲ ಪದಗಳನ್ನೂ ಬಳಸಿಯಾಗಿದೆ. ಬಾಳಸಂಗಾತಿಗೆ ಹೇಳದನ್ನು ಇಲ್ಲಿ ಬರೆಯಬೇಕು. ಹದಿಹರೆಯದಲ್ಲಿ ಗಂಭೀರವಾಗಿ ‘ಕೋಟಿತೀರ್ಥ’ ಬರೆದೆ. 52 ವರ್ಷವಾದಾಗ ‘ಅನಿಸುತಿದೆ...’ ಬರೆದೆ’ ಎಂದು ನೆನಪಿಸಿಕೊಂಡರು. 

‘ಸಿನಿಮಾ ರಂಗಕ್ಕೆ ಹೋಗಿ ಹಾಳಾದ ಎನ್ನುತ್ತಾರೆ. ಆದರೆ ನಾನು ಬರವಣಿಗೆಯನ್ನು ನಿಲ್ಲಿಸಿಲ್ಲ. ಯುವ ಜನತೆ ನನ್ನ ಹಾಡು ಕೇಳಿದ ಬಳಿಕ ನನ್ನ ಪುಸ್ತಕ ಓದುತ್ತಿದ್ದಾರೆ. ನನ್ನ ಪುಸ್ತಕಗಳ‌ ಮರುಮುದ್ರಣ ಆಗಿದ್ದು ‘ಮುಂಗಾರು ಮಳೆ’ ಬಂದ‌ ನಂತರ’ ಎಂದು ಕಾಯ್ಕಿಣಿ ಹೇಳಿದರು. 

‘ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಹೀಗೆ ಮೂರೂ ಗುಣಗಳಿರುವ ಒಂದು ಅಪರೂಪದ ಮಾಧ್ಯಮ ಸಿನಿಮಾ’ ಎಂದ ಅವರು, ‘ಓರ್ವ ನಿರ್ದೇಶಕನಿಗೆ ಇದರ ಅರಿವು ಮತ್ತು ಹಿಡಿತವಿದ್ದರೆ ತೆರೆಯ ಮೇಲೆ ಅದ್ಭುತವಾದುದನ್ನು ಸೃಷ್ಟಿಸಬಹುದು’ ಎಂದರು.

‘ಸಿನಿಮಾ ಎನ್ನುವುದು ಸಾರ್ವಜನಿಕ ಆಸ್ತಿ. ಜೊತೆಯಾಗಿ ಅನುಭವಿಸಿದರಷ್ಟೇ ಅದರ ಮ್ಯಾಜಿಕ್‌ ತಿಳಿಯುತ್ತದೆ. ಮೊಬೈಲ್‌ನಲ್ಲಿ ಸಿನಿಮಾ ನೋಡುವುದರಿಂದ ಇದನ್ನು ಕಳೆದುಕೊಳ್ಳುತ್ತಿದ್ದೇವೆ. ಕಾದಂಬರಿಯನ್ನು ಓದುವಾಗಲೇ ಮನಸ್ಸಿನಲ್ಲಿ ನಮ್ಮದೇ ಕಲ್ಪನೆಯಲ್ಲಿ ಒಂದು ಸಿನಿಮಾ ಮಾಡಿರುತ್ತೇವೆ. ಹೀಗಿರುವಾಗ ಅದನ್ನು ಒಂದು ಸಿನಿಮಾದಲ್ಲಿ ನೋಡಿದಾಗ ಕೆಲವೊಮ್ಮೆ ಬೇಸರ ಆಗುತ್ತದೆ. ಕಾಸರವಳ್ಳಿಯವರು ಕಾದಂಬರಿಯ ಒಂದು ಅಂಶ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದರು’ ಎಂದು ಅವರು ಹೇಳಿದರು.

ಗೀತರಚನೆಯನ್ನು ಕಲಿಸುವುದಕ್ಕಾಗುವುದಿಲ್ಲ. ಒಂದೊಮ್ಮೆ ಕಲಿಸಿದರೆ ಅದು ಜಿಮ್‌ನಿಂದ ಹೊರಬರುವ ಒಂದೇ ರೀತಿಯ ದೇಹಗಳಂತೆ ಕಾಣಿಸಲಿವೆ.
–ಜಯಂತ ಕಾಯ್ಕಿಣಿ ಕವಿ

‘ಪೊನ್ನಿಯನ್‌ ಸೆಲ್ವನ್‌’ ಸವಾಲು  ‘

ಎ.ಆರ್‌.ರೆಹಮಾನ್‌ ಸಂಗೀತ ನಿರ್ದೇಶನದ ‘ಪೊನ್ನಿಯನ್‌ ಸೆಲ್ವನ್‌’ ಸಿನಿಮಾದ ಕನ್ನಡ ಅವತರಣಿಕೆಯ ಹಾಡುಗಳ ರಚನೆ ಸವಾಲಿನದ್ದಾಗಿತ್ತು. ಎರಡೂ ಭಾಗಗಳು ಸೇರಿ 14 ಹಾಡುಗಳಿವೆ. ಕನ್ನಡದಲ್ಲಿ ಪ್ರೀತಿ ಪ್ರೇಮ ಎನ್ನಲು ತುಟಿಗಳನ್ನು ತಾಗಿಸಬೇಕು. ತಮಿಳಿನಲ್ಲಿ ‘ಕಾದಲ್‌’ ಎನ್ನುವಾಗ ತುಟಿಗಳೇ ತಾಗುವುದಿಲ್ಲ. ತುಟಿಗಳು ಸೇರಿಸದೆ ಪ್ರೀತಿ ಹೇಗೆ ಮಾಡುತ್ತೀರಿ ಎಂದು ಮಣಿರತ್ನಂ ಅವರನ್ನು ಕೇಳಿದ್ದೆ?’ ಎನ್ನುವುದನ್ನು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.