ADVERTISEMENT

ಲಂಚ ನೀಡಿದ್ದ ಆರೋಪದ ದೂರು ವರ್ಗಾವಣೆ: ಎಸಿಬಿ ನಡೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 16:23 IST
Last Updated 22 ನವೆಂಬರ್ 2021, 16:23 IST

ಬೆಂಗಳೂರು: ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎಸ್‌.ಇಂದ್ರಕಲಾ ಮತ್ತು ಆರ್‌ಎಸ್‌ಎಸ್‌ ಮುಖಂಡ ಎ.ಸಿ.ವಿನಿತ್‌ಕುಮಾರ್‌ ಉನ್ನತ ಹುದ್ದೆಗಳನ್ನು ಪಡೆಯುವುದಕ್ಕಾಗಿ ಲಂಚ ನೀಡಿದ್ದ ಆರೋಪಕ್ಕೆ ಸಂಬಂಧಿಸಿದ ದೂರನ್ನು ಸಿಬಿಐಗೆ ವರ್ಗಾವಣೆ ಮಾಡಿರುವ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ನಿರ್ಧಾರಕ್ಕೆ ಜನಾಧಿಕಾರ ಸಂಘರ್ಷ ಪರಿಷತ್‌ ಆಕ್ಷೇಪ ವ್ಯಕ್ತಪಡಿಸಿದೆ.

ಇಂದ್ರಕಲಾ ಅವರು ರಾಜ್ಯಪಾಲರ ಹುದ್ದೆ ಪಡೆಯಲು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರ ನಿಕಟವರ್ತಿ ಎಂದು ಗುರುತಿಸಿಕೊಂಡಿದ್ದ ಯುವರಾಜ ಸ್ವಾಮಿಗೆ ₹ 8.24 ಕೋಟಿ ನೀಡಿದ್ದರು. ವಿನಿತ್‌ ಕುಮಾರ್‌ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯಲು ₹ 30 ಲಕ್ಷ ನೀಡಿದ್ದರು. ಈ ಇಬ್ಬರ ವಿರುದ್ಧವೂ ತನಿಖೆ ನಡೆಸುವಂತೆ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ್‌ ಅಯ್ಯರ್‌ ಎಸಿಬಿಗೆ ದೂರು ಸಲ್ಲಿಸಿದ್ದರು. ಈ ಎರಡೂ ದೂರುಗಳನ್ನು ಸಿಬಿಐಗೆ ವರ್ಗಾಯಿಸಲಾಗಿದೆ.

‘ಈ ದೂರುಗಳ ಜತೆಯಲ್ಲೇ ನೀಡಿದ್ದ ಇತರ ಮೂರು ದೂರುಗಳ ಬಗ್ಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಇಂದ್ರಕಲಾ ವಿರುದ್ಧದ ದೂರಿನ ಕುರಿತು ಎಸಿಬಿ ಅಧಿಕಾರಿಗಳು ಆರಂಭದಿಂದಲೂ ಹಿಂದೇಟು ಹಾಕಿದ್ದರು. ನ್ಯಾಯಾಧೀಶರ ರಕ್ಷಣೆ ಕಾಯ್ದೆ ನಿವೃತ್ತ ನ್ಯಾಯಮೂರ್ತಿ ಲಂಚ ನೀಡಿರುವುದಕ್ಕೆ ಅನ್ವಯವಾಗುವುದಿಲ್ಲ ಎಂದು ನಾವು ಮನವರಿಕೆ ಮಾಡಿದ್ದೆವು. ಅದನ್ನು ಕಡೆಗಣಿಸಿ ದೂರನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಆದರ್ಶ್‌ ಅಯ್ಯರ್‌, ಪರಿಷತ್‌ನ ಇನ್ನೊಬ್ಬ ಸಹ ಅಧ್ಯಕ್ಷ ಪ್ರಕಾಶ್‌ ಬಾಬು ಬಿ.ಕೆ. ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್‌ ವಿ.ಬಿ. ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಒಬ್ಬರು ನಿವೃತ್ತ ನ್ಯಾಯಮೂರ್ತಿ, ಇನ್ನೊಬ್ಬರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತ ಎಂಬ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ. ದೂರು ತಮ್ಮ ಕಾರ್ಯವ್ಯಾಪ್ತಿಗೆ ಬರದು ಎಂಬ ಎಸಿಬಿ ತೀರ್ಮಾನ ಕಾನೂನಾತ್ಮಕವಾಗಿ ಸರಿಯಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.