
ಬೆಂಗಳೂರು: ಕೆ–100 ನಾಗರಿಕ ಜಲಮಾರ್ಗಕ್ಕೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆನೆಪಾಳ್ಯ ಜಂಕ್ಷನ್‌ನಿಂದ ಶಾಂತಿನಗರ ಬಸ್ ನಿಲ್ದಾಣದವರೆಗೆ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ‘ಕೆ–100 ನಾಗರಿಕ ಜಲಮಾರ್ಗ’ವನ್ನು ನಡಿಗೆಯ ಮೂಲಕ ಪರಿಶೀಲಿಸಿದ ನಂತರ ಮಾತನಾಡಿದ ಅವರು ಮಾತನಾಡಿದರು.
ಬಹುತೇಕ ಭಾಗದಲ್ಲಿ ಕೊಳಚೆ ನೀರು ನಿಯಂತ್ರಣದಲ್ಲಿದೆ. ಇನ್ನೂ ನಿಯಂತ್ರಣವಾಗದಿರುವ ಸ್ಥಳಗಳನ್ನು ಬೆಂಗಳೂರು ಜಲಮಂಡಳಿಯು ಸಮೀಕ್ಷೆ ನಡೆಸಿ ತಕ್ಷಣ ಸಮಗ್ರ ಪರಿಹಾರದ ಯೋಜನೆ ಸಲ್ಲಿಸಬೇಕು ಎಂದು ತಿಳಿಸಿದರು.
ಕುಂಬಾರಗುಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 5 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ನಿರ್ಮಿಸಲಾಗಿದೆ. ಇದು ಒಳಚರಂಡಿಯ ಕೊಳಚೆ ನೀರನ್ನು ಸಂಸ್ಕರಿಸಿ, ದೀರ್ಘಕಾಲಿಕವಾಗಿ ಕೆ–100 ವ್ಯಾಲಿಯ ರಾಜಕಾಲುವೆಗೆ ಸಂಸ್ಕರಿತ ನೀರನ್ನು ಬಿಡುತ್ತಿದೆ. ಉಳಿದ ಕೊಳಚೆ ನೀರನ್ನು ಸಂಸ್ಕರಿಸಲು ಜೈವಿಕ ವಿಧಾನಗಳು ಹಾಗೂ ಪ್ರಕೃತಿ ಆಧಾರಿತ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಾಜಕಾಲುವೆಗೆ ತ್ಯಾಜ್ಯ ನೀರು ಸೇರುವುದನ್ನು ನಿಲ್ಲಿಸಲು ಜಲಮಂಡಳಿ 15 ಎಂ.ಎಲ್.ಡಿ ಸಾಮರ್ಥ್ಯದ ಇಂಟರ್ ಮೀಡಿಯೇಟ್ ಸೀವೇಜ್ ಪಂಪಿಂಗ್ ಸ್ಟೇಷನ್ (ಐಎಸ್‌ಪಿಎಸ್) ನಿರ್ಮಿಸುತ್ತಿದ್ದು, ಇನ್ನೊಂದು ತಿಂಗಳೊಳಗೆ ಕಾರ್ಯಾಚರಣೆ ಪ್ರಾರಂಭಿಸಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಕೆ–100 ಮಾರ್ಗದಲ್ಲಿ ಕೆಲವಡೆ ಕಸ ಮತ್ತು ತ್ಯಾಜ್ಯ ಬಿಸಾಡುತ್ತಿರುವುದು ಕಂಡು ಬಂದಿದೆ. ಅಗತ್ಯ ಇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಎಂದರು.
ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ 9.2 ಕಿ.ಮೀ ಉದ್ದದ ಕೋರಮಂಗಲ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ರಮೇಶ್ ಕೆ.ಎನ್., ಅಭಿವೃದ್ಧಿ ಹೆಚ್ಚುವರಿ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ್ ಕಬಾಡೆ, ರಾಜೇಶ್, ರವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.