ADVERTISEMENT

ಕಸಾಪ ಚುನಾವಣೆ ವ್ಯವಸ್ಥೆ ಬದಲಿಸಿ: ಸಾಹಿತಿ ಕೆ.ಮರುಳಸಿದ್ದಪ್ಪ ಸರ್ಕಾರಕ್ಕೆ ಆಗ್ರಹ

ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಸರ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 19:24 IST
Last Updated 12 ಫೆಬ್ರುವರಿ 2026, 19:24 IST
<div class="paragraphs"><p>ಕಾರ್ಯಕ್ರಮದಲ್ಲಿ (ಮೊದಲ ಸಾಲು) ಗುರುಪ್ರಸಾದ್‌ ಕಂಟಲಗೆರೆ, ಪದ್ಮರಾಜ ದಂಡಾವತಿ, ಎಚ್‌.ಡಿ. ಜಯಪದ್ಮ ಕುಮಾರ್, ಕಾರ್ಗಲ್‌ ಭೋಗರಾಜ್‌, ಕೆ.ವಿ.ಮುದ್ದುವೀರಪ್ಪ, ಮಧುಸೂದನ ಎನ್‌. ಅವರಿಗೆ ಕಸಾಪ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.&nbsp;</p></div>

ಕಾರ್ಯಕ್ರಮದಲ್ಲಿ (ಮೊದಲ ಸಾಲು) ಗುರುಪ್ರಸಾದ್‌ ಕಂಟಲಗೆರೆ, ಪದ್ಮರಾಜ ದಂಡಾವತಿ, ಎಚ್‌.ಡಿ. ಜಯಪದ್ಮ ಕುಮಾರ್, ಕಾರ್ಗಲ್‌ ಭೋಗರಾಜ್‌, ಕೆ.ವಿ.ಮುದ್ದುವೀರಪ್ಪ, ಮಧುಸೂದನ ಎನ್‌. ಅವರಿಗೆ ಕಸಾಪ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 

   

ಬೆಂಗಳೂರು: ‘ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿದಿಲ್ಲ. ಈ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ವ್ಯವಸ್ಥೆಯನ್ನು ಬದಲಾಯಿಸಬೇಕು’ ಎಂದು ಸಾಹಿತಿ ಕೆ. ಮರುಳಸಿದ್ದಪ್ಪ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. 

ಕಸಾಪ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ‘ಜೈನ ಧರ್ಮ 63 ಒಳನೋಟಗಳು’ ಕೃತಿಗೆ ‘ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ’, ‘ಸುಧಾ’ ವಾರಪತ್ರಿಕೆ ಮುಖ್ಯ ಉಪಸಂಪಾದಕಿ ಉಮಾ ಅನಂತ್‌ ಅವರ ‘ಆರೋಗ್ಯ ಮಾಹಿತಿ ಸ್ವಸ್ಥ ಬದುಕಿಗೆ ಸ್ಫೂರ್ತಿ’ ಕೃತಿಗೆ ‘ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ’ ಸೇರಿ 2024ನೇ ಸಾಲಿನ 52 ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.  

ADVERTISEMENT

ಈ ವೇಳೆ ಮಾತನಾಡಿದ ಪ್ರಶಸ್ತಿಗಳ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದ ಮರುಳಸಿದ್ದಪ್ಪ, ‘ನೂರಾರು ಸಂಖ್ಯೆಯಲ್ಲಿ ಸದಸ್ಯರಿದ್ದಾಗ ಕಸಾಪ ಇಡೀ ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯಂತೆ ಕೆಲಸ ಮಾಡುತ್ತಿತ್ತು. ಈಗ ಅದು ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿದಿಲ್ಲ. ಈ ಸಂಸ್ಥೆಗೆ ಅಧ್ಯಕ್ಷರಾಗಿ ಬಂದವರೊಬ್ಬರು, ಪಂಪ ಮಹಾಕವಿ ರಸ್ತೆಯ ಹೆಸರನ್ನು ಸಾಹಿತ್ಯ ಪರಿಷತ್ತು ರಸ್ತೆಯೆಂದು ಬದಲಾಯಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದು ಪರಿಷತ್ತಿನ ಅವನತಿ ಸೂಚಿಸಲಿದೆ’ ಎಂದರು. 

‘ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹಣವುಳ್ಳವರು ಮಾತ್ರ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ₹25 ಲಕ್ಷದಿಂದ ₹30 ಲಕ್ಷ ವೆಚ್ಚ ಮಾಡುವವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಜನರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ, ವರ್ಷಕ್ಕೆ ₹80 ಕೋಟಿಯಿಂದ ₹100 ಕೋಟಿಯನ್ನು ಸರ್ಕಾರವು ಪರಿಷತ್ತಿಗೆ ಒದಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಲು, 4.5 ಲಕ್ಷ ಜನ ಮತ ಹಾಕುವ ವ್ಯವಸ್ಥೆ ಕಿತ್ತು ಹಾಕಬೇಕು. ಸರ್ಕಾರ ಪರ್ಯಾಯ ಮಾರ್ಗವನ್ನು ಹುಡುಕಬೇಕು’ ಎಂದು ಹೇಳಿದರು. 

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ‘ಸಾಹಿತ್ಯ ಮತ್ತು ಕಲೆಯು ಕಟ್ಟುವ ಕಡೆ ಹೋಗಬೇಕೆ ಹೊರತು, ಕೆಡವುವ ಕಡೆಗೆ ಹೋಗಬಾರದು. ಮಕ್ಕಳಿಗೆ ಮಣ್ಣಿನ ವಾಸನೆ, ಮಳೆಯ ವಾಸನೆ ಪರಿಚಯಿಸಬೇಕು’ ಎಂದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಜಾಗತೀಕರಣದ ನಂತರ ಅನೇಕ ಭಾಷೆ ಬಿಕ್ಕಟ್ಟು ಎದುರಿಸಿದವು. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತು, ಲೇಖಕರ ಮೇಲೆ ದೊಡ್ಡ ಜವಾಬ್ದಾರಿಯಿದೆ’ ಎಂದು ಹೇಳಿದರು. 

ಕಸಾಪ ಆಡಳಿತಾಧಿಕಾರಿ ಕೆ.ಎಂ. ಗಾಯಿತ್ರಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಉಪಸ್ಥಿತರಿದ್ದರು.

ಉಮಾ ಅನಂತ್‌ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.