
ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮಲ್ಲೇಶ್ವರದಲ್ಲಿ ಆಯೋಜಿಸಿರುವ ಒಂಬತ್ತನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಚಾಲನೆ ನೀಡಲಾಯಿತು. ಸೋಮವಾರದವರೆಗೆ ಪರಿಷೆ ನಡೆಯಲಿದೆ. ಮಲ್ಲೇಶ್ವರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಕಾಡು ಮಲ್ಲೇಶ್ವರ ದೇವಾಲಯದ ರಥ ಬೀದಿಯಲ್ಲಿ ಬೇಯಿಸಿದ ಕಡಲೇಕಾಯಿ ಘಮ, ಹಲವು ಬಗೆಯ ತಿಂಡಿ ತಿನಿಸುಗಳು, ಆಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಲಾಗಿದೆ. ಪರಿಷೆಯಲ್ಲಿ 400ಕ್ಕೂ ಹೆಚ್ಚು ಮಳಿಗೆಗಳನ್ನು ಉಚಿತವಾಗಿ ನೀಡಲಾಗಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಹಾಸನ, ಮೈಸೂರು, ಚಿಕ್ಕಬಳ್ಳಾಪುರದ ರೈತರು ಶೇಂಗಾ ಮಾರಾಟ ಮಾಡುತ್ತಿದ್ದಾರೆ. ಪರಿಷೆಗೆ ಸಾವಿರಾರು ಜನರು ಭೇಟಿ ನೀಡಿದ್ದರು.
ಹೊರ ರಾಜ್ಯದ ಶೇಂಗಾ: ತಮಿಳುನಾಡು, ಆಂಧ್ರಪ್ರದೇಶದ ವಿವಿಧೆಡೆಯಿಂದಲೂ ಹಾಲ್ಗಡಲೆ, ಕೆಂಪುಕಡಲೆ ಸೇರಿ ಎರಡು, ಮೂರು ಹಾಗೂ ನಾಲ್ಕು ಬೀಜದ ನಾಟಿ, ಹೈಬ್ರಿಡ್ ತಳಿಗಳ ಕಡಲೆಕಾಯಿಗಳು ಬಂದಿವೆ. ರೈತರು ಒಂದು ಸೇರಿಗೆ ₹50 ರಿಂದ ₹60 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ದೇವಸ್ಥಾನದ ಆವರಣದಲ್ಲಿರುವ ನಂದಿಗೆ ಕಡಲೇಕಾಯಿಂದ ಅಲಂಕಾರ ಮಾಡಲಾಗಿದ್ದು, ಸಾರ್ವಜನಿಕರು ಇದರ ಮುಂಭಾಗದಲ್ಲಿ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಕಾಡು ಮಲ್ಲಿಕಾರ್ಜುನ ಸ್ವಾಮಿ ಹಾಗೂ ಗಂಗಮ್ಮದೇವಿಗೆ ಕಡಲೇಕಾಯಿಯಿಂದಲೇ ಅಭಿಷೇಕ ಮಾಡಲಾಯಿತು.
ಪರಿಷೆಗೆ ಚಾಲನೆ ನೀಡಿ ನಂತರ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ‘ಮುಜರಾಯಿ ಇಲಾಖೆ ವತಿಯಿಂದ ಬಸವನಗುಡಿಯಲ್ಲಿ ಐದು ದಿನ ಹಾಗೂ ಮಲ್ಲೇಶ್ವರದಲ್ಲಿ ಮೂರು ದಿನ ಕಡಲೆಕಾಯಿ ಪರಿಷೆಯನ್ನು ನಡೆಸಲಾಗುತ್ತಿದೆ. ನವೆಂಬರ್ 17ರಂದು ಬಸವನಗುಡಿಯ ಕಡಲೆಕಾಯಿ ಪರಿಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.
‘ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಳ್ಳುವ ರೈತರಿಗೆ ಸುಂಕ ವಿಧಿಸುತ್ತಿಲ್ಲ. ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಸಲು 1 ಲಕ್ಷಕ್ಕೂ ಅಧಿಕ ಬಟ್ಚೆ, ಪೇಪರ್ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಟಿ.ಎ.ಶರವಣ ಮತ್ತು ಕಾಡು ಮಲ್ಲೇಶ್ವರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಉಪಾಧ್ಯಕ್ಷೆ ಲೀಲಾ ಸಂಪಿಗೆ, ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.