
ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬರಬೇಕಿದ್ದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲು ಒಂದೂವರೆ ವರ್ಷಗಳಿಂದ ಎಸ್‌ಎಂವಿಟಿಯಿಂದಲೇ ಚಲಿಸುತ್ತಿದೆ. ನಗರದ ಒಳಗೆ ಬಾರದೇ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಈ ವಂದೇ ಭಾರತ್ ರೈಲಿಗೆ ಅನುಮೋದನೆ ನೀಡುವಾಗ ಕಲಬುರಗಿ–ಕಂಟೋನ್ಮೆಂಟ್ ನಡುವೆ ಎಂದೇ ನಮೂದಿಸಲಾಗಿತ್ತು. ಆದರೆ, ಕಲಬುರಗಿಯಲ್ಲಿ ಪಿಟ್‌ಲೈನ್ ಮತ್ತು ಚಾರ್ಜಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಂಟೋನ್ಮೆಂಟ್ ನಿಲ್ದಾಣದಲ್ಲಿಯೂ ಇಲ್ಲದಿರುವುದರಿಂದ ತಾತ್ಕಾಲಿಕವಾಗಿ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ)–ಕಲಬುರಗಿ ನಡುವೆ ವಂದೇ ಭಾರತ್ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
2024ರ ಮಾರ್ಚ್ 12ರಂದು ವಂದೇ ಭಾರತ್ ರೈಲು ಆರಂಭವಾಗಿದ್ದು, ಒಂದೂವರೆ ವರ್ಷಗಳ ಬಳಿಕವೂ ತಾತ್ಕಾಲಿಕ ವ್ಯವಸ್ಥೆ ಮುಂದುವರಿದಿದೆ. ನಗರದ ಹೊರಗೆ ಬೈಯಪ್ಪನಹಳ್ಳಿ ಎಸ್‌ಎಂವಿಟಿ ನಿಲ್ದಾಣ ಇರುವುದರಿಂದ ಬೆಂಗಳೂರು ದಕ್ಷಿಣ, ಪಶ್ಚಿಮ ಸೇರಿದಂತೆ ನಗರದ ಬಹುತೇಕ ಭಾಗದ ಜನರಿಗೆ ತೊಂದರೆಯಾಗಿದೆ.
ಶುಕ್ರವಾರ ಹೊರತುಪಡಿಸಿ ವಾರಕ್ಕೆ ಆರುದಿನ ಸಂಚರಿಸುವ ರೈಲು ಬೆಳಿಗ್ಗೆ 5.15ಕ್ಕೆ ಕಲಬುರಗಿಯಿಂದ ಹೊರಡುತ್ತಿದೆ. ಮಧ್ಯಾಹ್ನ 2ಕ್ಕೆ ಎಸ್‌ಎಂವಿಟಿಗೆ ತಲುಪುತ್ತಿದೆ. ಮಧ್ಯಾಹ್ನ 2.40ಕ್ಕೆ ಎಸ್‌ಎಂವಿಟಿಯಿಂದ ಹೊರಟು ರಾತ್ರಿ 11.30ಕ್ಕೆ ಕಲಬುರಗಿಗೆ ತಲುಪುತ್ತಿದೆ. ಮಧ್ಯೆ ಯಲಹಂಕ ಜಂಕ್ಷನ್, ಅನಂತಪುರ, ಗುಂತಕಲ್ ಜಂಕ್ಷನ್, ಮಂತ್ರಾಲಯ ರಸ್ತೆ, ರಾಯಚೂರು ಜಂಕ್ಷನ್, ಯಾದಗಿರಿಯಲ್ಲಿ ನಿಲುಗಡೆಯನ್ನು ಹೊಂದಿದೆ.
ಮಂತ್ರಾಲಯ ರಸ್ತೆ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದರಿಂದ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಈ ರೈಲು ಅನುಕೂಲವಾಗಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟರೆ ರಾತ್ರಿ 8.15ಕ್ಕೆ ಮಂತ್ರಾಲಯದಲ್ಲಿ ಇರಬಹುದು. ಹಾಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಕಂಟೋನ್ಮೆಂಟ್‌ನಿಂದಲೇ ವಂದೇಭಾರತ್ ರೈಲು ಸಂಚರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
‘ಜನಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷ್ಯ’
ರಾಜ್ಯದ ಪ್ರಯಾಣಿಕರಿಗೆ ಅನುಕೂಲವಾಗದ ತಮಿಳುನಾಡು ಕೇರಳದ ಪ್ರಯಾಣಿಕರಿಗೆ ಪ್ರಯೋಜನವಾಗುವ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ರೈಲಿಗೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಕನ್ನಡಿಗರಿಗೆ ಅನುಕೂಲವಾಗುವ ಕಲಬುರಗಿ–ಬೆಂಗಳೂರು ವಂದೇಭಾರತ್ ರೈಲಿಗೆ ಕಂಟೋನ್ಮೆಂಟ್‌ನಲ್ಲಿ ಅವಕಾಶ ನೀಡಿಲ್ಲ. ಈ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವರು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನೈರುತ್ಯ ರೈಲ್ವೆಗೆ ಈ ರೈಲನ್ನು ಹಸ್ತಾಂತರಿಸಲು ಸೆಂಟ್ರಲ್ ರೈಲ್ವೆ ತಯಾರಿದ್ದರೂ ಈ ಪ್ರಕ್ರಿಯೆ ನಡೆದಿಲ್ಲ ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.