
ಸುದ್ದಿಗೋಷ್ಠಿ
ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ವತಿಯಿಂದ ನವೆಂಬರ್ 1 ರಿಂದ ಡಿಸೆಂಬರ್ 7ರವರೆಗೆ ಕನ್ನಡ ಪುಸ್ತಕ ಹಬ್ಬವನ್ಬು ಚಾಮರಾಜಪೇಟೆಯ ಕೇಶಲಶಿಲ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
37 ದಿನಗಳ ಐದನೇ ಪುಸ್ತಕ ಹಬ್ಬದಲ್ಲಿ 40ರಿಂದ 50 ಸಾವಿರ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯವಲ್ಲದೇ ಇತರೆ ಪ್ರಕಾಶನಗಳ ಪುಸ್ತಕಗಳು ಪ್ರದರ್ಶನದಲ್ಲಿ ಸಿಗಲಿವೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯ ವಿಶ್ವಸ್ಥ ಕೆ.ಎಸ್.ನಾರಾಯಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುಸ್ತಕ ಹಬ್ಬದ ಸಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ.
ಫಯಾಜ್ ಖಾನ್ ಕಾರ್ಯಕ್ರಮ
ಪ್ರತಿದಿನ ಸಂಜೆ ಸಂಸ್ಕಾರಭಾರತೀ ಸಹಯೋಗದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನ, ತಾಳವಾದ್ಯ ಕಛೇರಿ ಇರಲಿವೆ. ವಿದ್ಯಾಭೂಷಣ, ಫಯಾಜ್ ಖಾನ್, ಸಂಗೀತ ಕಟ್ಟಿ ಸಹಿತ ಪ್ರಮುಖ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ ಎಂದರು.
ನ.1 ರಂದು ಬೆಳಗ್ಗೆ 11 ಗಂಟೆಗೆ ಲೋಕಸಭಾ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಸ್ತಕ ಹಬ್ಬವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಭಾರತಸರಕಾರದ ಸಾಮರ್ಥ್ಯನಿರ್ಮಾಣ ಆಯೋಗದ ಮಾನವಸಂಪನ್ಮೂಲ ಸದಸ್ಯ ಆರ್. ಬಾಲಸುಬ್ರಮಣ್ಯಂ, ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸುವರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಮುಖ್ಯಸ್ಥರಾದ ಸುಬ್ರಹ್ಮಣ್ಯ ಬಿ ಎ ಹಾಗೂ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್ಟ ಮಾತನಾಡಿ, ಪುಸ್ತಕ ಪ್ರಕಟನೆಯಲ್ಲದೆ, ಸದಭಿರುಚಿಯ ಸಾಹಿತ್ಯಪ್ರಸಾರವೂ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಮುಖ ಚಟುವಟಿಕೆ. ಈ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ 3 ಪುಸ್ತಕ ಮಳಿಗೆಗಳಿವೆ. ರಾಜ್ಯದಾದ್ಯಂತ ಇರುವ ಪುಸ್ತಕ ಮಾರಾಟಗಾರರು, ಪರಿಚಾರಕರ ಮೂಲಕ ಓದುಗರನ್ನು ತಲುಪಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿಯೂ ಈ ಪುಸ್ತಕ ಹಬ್ಬಗಳನ್ನು ನಡೆಸುತ್ತಿದ್ದೇವೆ. ಈ ಹಬ್ಬಗಳಲ್ಲಿ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿ ವಿಶೇಷ ಉಪನ್ಯಾಸಗಳು, ಪುಸ್ತಕಗಳ ಲೋಕಾರ್ಪಣೆ, ಸಾಹಿತಿಗಳೊಂದಿಗೆ ಸಂವಾದ, ಮೊದಲಾದ ಕಾರ್ಯಕ್ರಮಗಳೂ ನಡೆದಿವೆ ಎಂದು ತಿಳಿಸಿದರು.
ರಾಷ್ಟ್ರೋತ್ಥಾನ ಸಾಹಿತ್ಯದ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ-ಸಂಘಸಂಸ್ಥೆಗಳ ಬಹುಮಾನ-ಪ್ರಶಸ್ತಿಗಳಿಗೂ ಪಾತ್ರವಾಗಿವೆ. ‘ತೋರ್‌ಬೆರಳು’, ‘ಅಜೇಯ’, ‘ಅದಮ್ಯ’, ‘ಶತಮಾನದ ತಿರುವಿನಲ್ಲಿ ಭಾರತ’, ‘ಗಾಂಧೀಯ ಅರ್ಥಶಾಸ್ತ್ರ’, ‘ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳು ಗೌರವಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಅಂಕಿತ ದತ್ತಿ ಪ್ರಶಸ್ತಿ’ಯೂ ರಾಲಭಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಡುವ ‘2021ರ ಅತ್ಯುತ್ತಮ ಪ್ರಕಾಶನ’ ವಾರ್ಷಿಕ ಪ್ರಶಸ್ತಿಯೂ ಲಭಿಸಿದೆ ಎಂದು ವಿವರ ನೀಡಿದರು.
ಶೋಭಾಯಾತ್ರೆಗೆ ಅನುಮತಿ
ಪುಸ್ತಕ ಹಬ್ಬದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 9.30ಕ್ಕೆ ಗಂಟೆಗೆ ಎನ್. ಆರ್. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣದಿಂದ ರಾಷ್ಟ್ರೋತ್ಥಾನ ಪರಿಷತ್ತಿನ ವರೆಗೆ ಭುವನೇಶ್ವರಿ ತಾಯಿ ಶೋಭಾಯಾತ್ರೆ ನಡೆಯಲಿದ್ದು. ಇದಕ್ಕೆ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ವಿಘ್ನೇಶ್ವರ ಭಟ್ ತಿಳಿಸಿದರು.
ಹಿರಿಯ ವ್ಯವಸ್ಥಾಪಕ ಉಮೇಶ ಕುಮಾರ್ ಶಿಮ್ಲಡ್ಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.