ADVERTISEMENT

ಕನ್ನಡ ಕಡೆಗಣಿಸಿದವರ ವಿರುದ್ಧ ಕ್ರಮಕ್ಕೆ ಜೆ.ಸಿ. ಚಂದ್ರಶೇಖರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 10:19 IST
Last Updated 18 ಜನವರಿ 2021, 10:19 IST

ಬೆಂಗಳೂರು: ‘ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್‌ನಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಡಿಗಲ್ಲು ಹಾಕಿದ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಖಂಡನೀಯ’ ಎಂದು ರಾಜ್ಯಸಭೆ ಸದಸ್ಯ ಕಾಂಗ್ರೆಸ್‌ನ ಜೆ.ಸಿ. ಚಂದ್ರಶೇಖರ್‌ ಹೇಳಿದ್ದಾರೆ.

‘ನಾಡು, ನುಡಿ, ಗಡಿಯನ್ನು ಕಾಪಾಡಬೇಕಾದ ಸರ್ಕಾರಗಳೇ ಈ ರೀತಿ ವರ್ತಿಸುವುದನ್ನು ಬಿಟ್ಟು, ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯ ನಡೆಯದಂತೆ ಕನ್ನಡಿಗರ ಹಿತ ಕಾಯಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕನ್ನಡ ಕಡೆಗಣನೆಗೆ ಕಾರಣರಾದವರ ಮೇಲೆ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಆನೆ ನಡೆದದ್ದೇ ದಾರಿ ಎಂಬ ಧೋರಣೆ ಪ್ರಜಾಪ್ರಭುತ್ವದಲ್ಲಿ ಸಲ್ಲದು. ತಮ್ಮ ಸರ್ಕಾರ ಅಧಿಕಾರ ನಡೆಸುತ್ತಿರುವುದು ಪ್ರಜ್ಞಾವಂತ, ಸ್ವಾಭಿಮಾನಿ ಕನ್ನಡ ಮತಬಾಂಧವರಿಂದ ಎಂಬುದನ್ನು ಮರೆಯಬಾರದು. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿಚಾರ ವಿಕೋಪಕ್ಕೆ ಹೋಗುತ್ತಿದೆ. ಈ ಘಟನೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇದು 7.5 ಕೋಟಿ ಕನ್ನಡಿಗರ ಸರ್ಕಾರವೇ ಹೊರತು ಹಿಂದಿ ಭಾಷಿಗರ ಸರ್ಕಾರವಲ್ಲ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಕೇಂದ್ರ ಗೃಹ ಸಚಿವರು ಈ ಹಿಂದೆ ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾಗ ತಮಿಳು ಭಾಷೆಯ ಫಲಕಗಳು, ಫ್ಲೆಕ್ಸ್ ಬೋರ್ಡ್‌ಗಳು, ಮಧ್ಯಪ್ರದೇಶಕ್ಕೆ ಭೇಟಿಯ ಸಮಯದಲ್ಲಿ ಹಿಂದಿ ಭಾಷೆಯ ಫಲಕಗಳು, ಫ್ಲೆಕ್ಸ್ ಬೋರ್ಡ್‌ಗಳನ್ನು ರಾರಾಜಿಸಿ, ಅವರ ಮಾತೃಭಾಷೆಯ ಮಹತ್ವ ಮೆರೆದರು. ಆದರೆ, ಕನ್ನಡದ ಮುಕುಟಮಣಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕುವೆಂಪುರವರ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ಕೊಟ್ಟಾಗ ಭಾಷೆ ಸೂಕ್ಷ ವಿಚಾರವಾಗಿದ್ದರೂ ಈಗಾಗಲೇ ರಾಜ್ಯ ಪಾಲಿಸುತ್ತಿರುವ ತ್ರಿಭಾಷಾ ಸೂತ್ರವನ್ನೇ ಮರೆತದ್ದು ಸರಿಯಲ್ಲ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.