ADVERTISEMENT

ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಕನ್ನಡ ಕಲಿಕೆಗೆ ಹೆಚ್ಚಿದ ಒಲವು

ವರುಣ ಹೆಗಡೆ
Published 10 ಸೆಪ್ಟೆಂಬರ್ 2025, 1:25 IST
Last Updated 10 ಸೆಪ್ಟೆಂಬರ್ 2025, 1:25 IST
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಕನ್ನಡ ಕಲಿಕಾ ತರಗತಿಯಲ್ಲಿ ಪಾಲ್ಗೊಂಡ ಅನ್ಯಭಾಷಿಕರು 
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಕನ್ನಡ ಕಲಿಕಾ ತರಗತಿಯಲ್ಲಿ ಪಾಲ್ಗೊಂಡ ಅನ್ಯಭಾಷಿಕರು    

ಬೆಂಗಳೂರು: ನಗರದಲ್ಲಿ ನೆಲಸಿರುವ ಅನ್ಯಭಾಷಿಕರಿಗೆ ಉಚಿತವಾಗಿ ಕನ್ನಡ ಕಲಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈಗ ವೈದ್ಯಕೀಯ ಶಿಕ್ಷಣ ಸಂಸ್ಥೆ, ಅಪಾರ್ಟ್‌ಮೆಂಟ್‌ಗಳಲ್ಲಿಯೂ ಕನ್ನಡ ಬೋಧನೆ ತರಗತಿಗಳನ್ನು ಪ್ರಾಧಿಕಾರ ನಡೆಸಲಾರಂಭಿಸಿದೆ.

ಈಗಾಗಲೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ತರಗತಿಯನ್ನು ಪ್ರಾಧಿಕಾರ ನಡೆಸುತ್ತಿದೆ. 160 ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ವರ್ತೂರಿನಲ್ಲಿರುವ ಬ್ರಿಗೇಡ್ ಅಪಾರ್ಟ್‌ಮೆಂಟ್‌, ಕುಂಬಳಗೋಡಿನಲ್ಲಿರುವ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೂ ಕನ್ನಡ ಬೋಧಿಸಲಾಗುತ್ತಿದೆ. ಇಲ್ಲಿರುವ ನಿವಾಸಿಗಳಲ್ಲಿ ಹೆಚ್ಚಿನವರು ಅನ್ಯಭಾಷಿಕರಾಗಿದ್ದು, ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿ (ಎಚ್‌ಎಎಲ್) ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಂಪನಿ ಉದ್ಯೋಗಿಗಳಿಗೂ ಕನ್ನಡ ಕಲಿಸಲಾಗುತ್ತಿದೆ. ಭಾರತೀಯ ಜನಗಣತಿ ಕಚೇರಿ, ಅಕೌಂಟೆಂಟ್ ಜನರಲ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಕನ್ನಡ ಬೋಧನಾ ತರಗತಿಯನ್ನು ಪ್ರಾಧಿಕಾರ ನಡೆಸುತ್ತಿದೆ. ಈ ಕಲಿಕೆಯು ಕನ್ನಡ ಭಾಷೆಯಲ್ಲಿ ಸಂವಹನ ಹಾಗೂ ವ್ಯವಹರಿಸಲು ನೆರವಾಗುತ್ತಿದೆ. 

ADVERTISEMENT

36 ಗಂಟೆಗಳ ಕಲಿಕೆ: ಅನ್ಯಭಾಷಿಕರಿಗೆ ವಾರದಲ್ಲಿ 3 ದಿನಗಳಂತೆ 3 ತಿಂಗಳು ತರಗತಿಗಳನ್ನು ನಡೆಸಲಾಗುತ್ತಿದೆ. ಈ ಸಂಬಂಧ ಪ್ರತ್ಯೇಕ ಪಠ್ಯವನ್ನು ಸಿದ್ಧಪಡಿಸಲಾಗಿದೆ. 36 ಗಂಟೆಗಳ ತರಗತಿ ಇದಾಗಿದ್ದು, ಸಂವಹನಕ್ಕೆ ಸಹಕಾರಿಯಾದ ಸರಳ ಕನ್ನಡದ ಪಠ್ಯ ಇದಾಗಿದೆ. ಪದಕೋಶಗಳನ್ನು ಆಯಾ ಉದ್ಯೋಗ ಕ್ಷೇತ್ರಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಕನ್ನಡ ವರ್ಣಮಾಲೆಯಿಂದ ಆರಂಭವಾಗುವ ಕಲಿಕೆ, ಸರ್ವನಾಮ, ನಾಮಪದ, ವಿಭಕ್ತಿ ಒಳಗೊಂಡು ಸಂಪೂರ್ಣ ವ್ಯಾಕರಣ ಬೋಧಿಸಲಾಗುತ್ತದೆ. ಕಲಿಕೆಗೆ ಪೂರಕವಾದ ಪಠ್ಯ ಹಾಗೂ ವಿಡಿಯೊ ಲಿಂಕ್‌ಗಳನ್ನು ಒದಗಿಸಲಾಗುತ್ತದೆ. ಕಲಿಕೆ ಪೂರ್ಣಗೊಂಡ ಬಳಿಕ ಪರೀಕ್ಷೆಯನ್ನೂ ನಡೆಸಿ, ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ.

‘ಸಂವಹನಕ್ಕೆ ಸಹಕಾರಿಯಾದ ಸರಳ ಕನ್ನಡದ ಪಠ್ಯ ರೂಪಿಸಲಾಗಿದೆ. ಸಂಜೆ 6ರಿಂದ 7 ಗಂಟೆಯ ಅವಧಿಯಲ್ಲಿ ತರಗತಿಗಳು ನಡೆಯಲಿವೆ. ಕನ್ನಡಿಗರ ಜತೆಗೆ ವ್ಯವಹರಿಸಲು, ನಾಮಫಲಕಗಳನ್ನು ಓದಲು ಈ ಕಲಿಕೆ ಸಹಕಾರಿಯಾಗಿದೆ. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಕಲಿಕಾ ತರಗತಿ ನಡೆಸಲಾಗುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು. 

5 ಸಾವಿರಕ್ಕೂ ಅಧಿಕ ಮಂದಿ ಕಲಿಕೆ

ಕನ್ನಡೇತರರಿಗೆ ಕನ್ನಡ ಕಲಿಸುವ ಸಂಬಂಧ ಪ್ರಾಧಿಕಾರವು ಕಳೆದ ವರ್ಷ ಸಂವಹನ ಕೇಂದ್ರಿತವಾದ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಿ ಕಲಿಕಾ ತರಗತಿಗಳನ್ನು ಪ್ರಾರಂಭಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಪ್ರಾದೇಶಿಕ ಕಚೇರಿಯಲ್ಲಿ ಅಧಿಕಾರಿಗಳಿಗೆ ಕಳೆದ ವರ್ಷ ತರಗತಿ ನಡೆಸಲಾಗಿತ್ತು. ಅಲ್ಲಿನ ಅಧಿಕಾರಿಗಳು ಕನ್ನಡ ಕಲಿತಿದ್ದರು. ಮಲೆಯಾಳ ಮಿಷನ್‌ನ ಸಹಯೋಗದಲ್ಲಿ 2 ಸಾವಿರಕ್ಕೂ ಅಧಿಕ ಮಲೆಯಾಳಿಗಳಿಗೆ ಕನ್ನಡ ಕಲಿಸಲಾಗಿದೆ. ಈಗಾಗಲೇ ನಗರದಲ್ಲಿ 5 ಸಾವಿರಕ್ಕೂ ಅಧಿಕ ಅನ್ಯಭಾಷಿಕರು ಪ್ರಾಧಿಕಾರದ ನೆರವಿನಿಂದ ಕನ್ನಡ ಕಲಿತಿದ್ದಾರೆ.  ನಗರದ ಹೋಟೆಲ್‌ಗಳಲ್ಲಿ ಅನ್ಯಭಾಷಿಕರು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಹೋಟೆಲ್‌ಗಳ ಸಂಘದ ಸಹಯೋಗದಲ್ಲಿ ಹೋಟೆಲ್‌ಗಳಲ್ಲಿನ ಕನ್ನಡೇತರ ಸಿಬ್ಬಂದಿಗೂ ಕನ್ನಡ ಕಲಿಸಲು ಪ್ರಾಧಿಕಾರ ಚಿಂತನೆ ನಡೆಸಿದೆ.

ಪ್ರಾಧಿಕಾರದಿಂದಲೇ ಶಿಕ್ಷಕರು

ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರವೇ ಶಿಕ್ಷಕರನ್ನು ಒದಗಿಸಲಿದೆ. ಸಂಘ–ಸಂಸ್ಥೆಗಳು ತರಗತಿಗಳಿಗೆ ಸ್ಥಳಾವಕಾಶವನ್ನು ಗುರುತಿಸಿ ಕಲಿಕೆಗೆ ಅವಕಾಶ ಮಾಡಿಕೊಡಬೇಕಿದೆ. 36 ಗಂಟೆಗಳ ತರಗತಿಗೆ ₹ 30 ಸಾವಿರ ಗೌರವ ಸಂಭಾವನೆಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ. ಸಂಘ–ಸಂಸ್ಥೆಗಳಿಗೆ ಈ ಗೌರವಧನ ಭರಿಸಲು ಸಾಧ್ಯವಾಗದಿದ್ದಲ್ಲಿ ಪ್ರಾಧಿಕಾರವೇ ನೀಡಲಿದೆ.  ಕನ್ನಡ ಕಲಿಕಾ ಕೇಂದ್ರಗಳನ್ನು ನಡೆಸಲು ಇಚ್ಛಿಸುವವರು ಪ್ರಾಧಿಕಾರದ ಕಚೇರಿ ದೂರವಾಣಿ ಸಂಖ್ಯೆ 080-22286773 ಅಥವಾ ಕಾರ್ಯದರ್ಶಿ ಸಂತೋಷ ಹಾನಗಲ್ಲ (95357 25499) ಅವರನ್ನು ಸಂಪರ್ಕಿಸಬಹುದು. 

ಕನ್ನಡ ಕಲಿಯುವವರು ಯಾವ ಕ್ಷೇತ್ರದಿಂದ ಬಂದಿದ್ದಾರೆ ಎಂದು ತಿಳಿದು ಅಲ್ಲಿನ ಉದಾಹರಣೆ ಸಹಿತ ಕನ್ನಡ ಕಲಿಸಲಾಗುತ್ತಿದೆ. ಆದ್ದರಿಂದ ಕಲಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಉದ್ಯೋಗ ಶಿಕ್ಷಣ ಸಂಬಂಧ ಹೆಚ್ಚಿನ ಸಂಖ್ಯೆಯಲ್ಲಿ ಅನ್ಯಭಾಷಿಕರು ನಗರಕ್ಕೆ ಬರುತ್ತಿದ್ದು ಅವರಿಗೆ ಕನ್ನಡ ಕಲಿಸುವ ಕೆಲಸ ನಡೆದಿದೆ. ಅಪಾರ್ಟ್‌ಮೆಂಟ್‌ಗಳಲ್ಲೂ ಕಲಿಕೆ ನಡೆಯುತ್ತಿದೆ.
ಸಂತೋಷ ಹಾನಗಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.