ಬೆಂಗಳೂರು: ‘ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
‘ಈವರೆಗೆ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಸಂಬಂಧ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರೋದ್ಯಮಗಳು, ಬ್ಯಾಂಕ್‌ಗಳು, ಕೇಂದ್ರ ಸರ್ಕಾರಿ ಕಚೇರಿಗಳು ರಾಜ್ಯದಾದ್ಯಂತ ಇದ್ದು, ಈ ಸಂಸ್ಥೆಗಳಲ್ಲಿ ಹಲವಾರು ಅನ್ಯಭಾಷಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಾರ-ವ್ಯವಹಾರಗಳಿಗಾಗಿಯೂ ಬೇರೆ ರಾಜ್ಯಗಳಿಂದ ಬಂದು, ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿರುವ ಹಲವು ಅನ್ಯಭಾಷಿಕರು ಇದ್ದಾರೆ. ಈ ಸಮುದಾಯವನ್ನು ಪ್ರತಿ ಜಿಲ್ಲೆಯಲ್ಲಿ ಗುರುತಿಸಿ, ಅವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಲು ಪ್ರಾಧಿಕಾರ ನಿರ್ಣಯಿಸಿದೆ’ ಎಂದು ಹೇಳಿದ್ದಾರೆ.
‘ಈ ಬೃಹತ್ ಅಭಿಯಾನಕ್ಕೆ ರಾಜ್ಯದಾದ್ಯಂತ ಇರುವ ಆಸಕ್ತ ಸಂಘ ಸಂಸ್ಥೆಗಳು ಸಂಬಂಧಪಟ್ಟ ಜಿಲ್ಲಾಡಳಿತದಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲಾಡಳಿತವು ತರಗತಿ ನಡೆಸಲು ಸ್ಥಳಾವಕಾಶ ಒದಗಿಸಲಿದೆ. ಜಿಲ್ಲಾಡಳಿತದಿಂದ ನೇಮಿಸಲ್ಪಡುವ ಶಿಕ್ಷಕರಿಗೆ ಗೌರವ ಸಂಭಾವನೆಯನ್ನು ಪ್ರಾಧಿಕಾರವೇ ನೀಡಲಿದೆ. ಬೋಧನೆಗೆ ಸಂಬಂಧಿಸಿದಂತೆ ವಿಶೇಷ ಪಠ್ಯಕ್ರಮವನ್ನು ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಅನ್ಯಭಾಷಿಕರಿಗೆ ವಾರದಲ್ಲಿ 3 ದಿನಗಳಂತೆ 3 ತಿಂಗಳು ತರಗತಿಗಳನ್ನು ನಡೆಸಲಾಗುವುದು. ಕಲಿಕಾರ್ಥಿಗಳಿಂದ ಶಿಕ್ಷಕರ ಬೋಧನಾ ಗುಣಮಟ್ಟವನ್ನು ಅಳೆಯಲು ತೀರ್ಮಾನಿಸಲಾಗಿದ್ದು, ಈ ಪ್ರಯತ್ನದಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.