ADVERTISEMENT

ಕನ್ನಡ ಸಾಹಿತ್ಯ ಪರಿಷತ್: ಸಾಧಕರಿಗೆ ದತ್ತಿ ‍ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 19:16 IST
Last Updated 10 ಅಕ್ಟೋಬರ್ 2025, 19:16 IST
ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಗಳನ್ನು ಡಾ.ಎಚ್.ಎನ್. ಸುರೇಶ್, ಮಿತ್ರಾ ವೆಂಕಟರಾಜು, ಬಿ.ಎಸ್.ಶೈಲಜಾ ಅವರಿಗೆ ಪ್ರದಾನ ಮಾಡಲಾಯಿತು. ಮಹೇಶ್ ಜೋಶಿ, ಪಟೇಲ್ ಪಾಂಡು ಹಾಗೂ ಇತರರು ಇದ್ದಾರೆ. 
ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಗಳನ್ನು ಡಾ.ಎಚ್.ಎನ್. ಸುರೇಶ್, ಮಿತ್ರಾ ವೆಂಕಟರಾಜು, ಬಿ.ಎಸ್.ಶೈಲಜಾ ಅವರಿಗೆ ಪ್ರದಾನ ಮಾಡಲಾಯಿತು. ಮಹೇಶ್ ಜೋಶಿ, ಪಟೇಲ್ ಪಾಂಡು ಹಾಗೂ ಇತರರು ಇದ್ದಾರೆ.     

ಬೆಂಗಳೂರು: ‘ಕನ್ನಡ ಶಾಲೆಗಳನ್ನು ಉಳಿಸಬೇಕು ಮತ್ತು ಕನ್ನಡ ಅಕ್ಷರ ಭಾಷೆಯಾಗಬೇಕು ಎನ್ನುವ ಎರಡು ಕನಸುಗಳನ್ನು ಹೊತ್ತು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬಂದೆ. ಆದರೆ, ಎರಡೂ ಕನಸೇ ಆಗಿ ಬಿಡುವ ಆತಂಕ ಕಾಡುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ದೂರದರ್ಶನದ ನಿರ್ದೇಶಕರಾಗಿದ್ದಾಗ ಸದಾನಂದ ಸುವರ್ಣ ಅವರು ಶಿವರಾಮ ಕಾರಂತರ ಕುರಿತು ರೂಪಿಸಿದ್ದ ಸಾಕ್ಷ್ಯ ಚಿತ್ರಕ್ಕೆ ಪ್ರಾಯೋಜಕರು ದೊರಕದೆ ತಾವು ವೈಯಕ್ತಿಕ ನೆಲೆಯಲ್ಲಿ ಸಹಾಯ ಮಾಡಿದ ಪ್ರಸಂಗವನ್ನು ನೆನಪು ಮಾಡಿಕೊಂಡ ಮಹೇಶ ಜೋಶಿ, ‘ಕನ್ನಡಿಗರಲ್ಲಿನ ಅಭಿಮಾನದ ಕೊರತೆ ದೊಡ್ಡ ತೊಡಕಾಗಿದೆ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಬಿ.ಆರ್.ಗುರುಪ್ರಸಾದ್, ‘ಸಾಹಿತ್ಯಕ್ಕೆ ಬಹುಮುಖಿ ನೆಲೆ ಇದೆ. ಅದು ಕಲಿಕೆಯಾಗಿ, ಚಿಂತನೆಯಾಗಿ, ಅನುಭವ ಕಥನವಾಗಿ ನಮ್ಮ ಅರಿವನ್ನು ವಿಸ್ತರಿಸಲಿದೆ. ಈ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಬಹಳ ಮುಖ್ಯವಾದ ಕಾರ್ಯ’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್, ‘ಕನ್ನಡದ ದುಃಸ್ಥಿತಿಗೆ ನಾವೇ ಕಾರಣಕರ್ತರು. ಭಾಷಾಭಿಮಾನ ಬೆಳೆಸುವ ಮುಖ್ಯ ಕಾರ್ಯಕ್ಕೆ ಎಲ್ಲರೂ ಪರಿಷತ್ತಿನ ಜೊತೆ ಕೈಗೂಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

ದತ್ತಿ ದಾನಿಗಳ ಪರವಾಗಿ ಎ.ಆರ್.ನಾರಾಯಣಘಟ್ಟ ಮತ್ತು ಟಿ.ಎಸ್.ಶೈಲಜಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರಾದ ಡಾ.ಕೆ.ಶಿವರಾಮ ಕಾರಂತ ಮತ್ತು ಸಾಲಿ ರಾಮಚಂದ್ರ ರಾಯರ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು.

ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರವನ್ನು ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಎಚ್.ಎನ್.ಸುರೇಶ್ ಅವರಿಗೂ ಪಂಕಜಶ್ರೀ ಪುರಸ್ಕಾರವನ್ನು ಮುಂಬೈನಲ್ಲಿ ನೆಲಸಿರುವ ಕಥೆಗಾರ್ತಿ ಮಿತ್ರಾ ವೆಂಕಟರಾಜು ಅವರಿಗೂ ಟಿ.ಗಿರಿಜಾ ಸಾಹಿತ್ಯ ದತ್ತಿಯನ್ನು ವಿಜ್ಞಾನ ಬರಹಗಾರ ಡಾ.ಬಿ.ಎಸ್.ಶೈಲಜಾ ಅವರಿಗೆ ಪ್ರದಾನ ಮಾಡಲಾಯಿತು.

ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಎಂ.ಪಟೇಲ್ ಪಾಂಡು ನಿರೂಪಿಸಿದರೆ, ಎಚ್.ಬಿ.ಮದನಗೌಡ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಡಿ.ಆರ್.ವಿಜಯ್ ಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.