ADVERTISEMENT

ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕ: ನಾಲ್ಕು ವರ್ಷಗಳಲ್ಲಿ ಒಂದೇ ಸಾಹಿತ್ಯ ಸಮ್ಮೇಳನ

ಕಸಾಪ ರಾಜ್ಯ ಘಟಕದಿಂದ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಸಿಗದ ಸೂಕ್ತ ಅನುದಾನ, ಸಹಕಾರ

ವರುಣ ಹೆಗಡೆ
Published 15 ಡಿಸೆಂಬರ್ 2025, 0:30 IST
Last Updated 15 ಡಿಸೆಂಬರ್ 2025, 0:30 IST
16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ನಡೆದಿದ್ದ ಮೆರವಣಿಗೆ 
16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ನಡೆದಿದ್ದ ಮೆರವಣಿಗೆ    

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಘಟಕದಿಂದ ಸೂಕ್ತ ಅನುದಾನ, ಸಹಕಾರ ಹಾಗೂ ಪ್ರೋತ್ಸಾಹ ಸಿಗದ ಕಾರಣ ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕವು ನಾಲ್ಕು ವರ್ಷಗಳ ಅವಧಿಯಲ್ಲಿ ಕೇವಲ ಒಂದೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದೆ. 

ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದ ಎಂ. ಪ್ರಕಾಶಮೂರ್ತಿ ನೇತೃತ್ವದ ಕಾರ್ಯಕಾರಿ ಸಮಿತಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದೆ. ಅಗತ್ಯ ಅನುದಾನ ಸೇರಿ ಆಡಳಿತಾತ್ಮಕ ಸಂಗತಿಗಳಿಗೆ ಕಸಾಪ ಕೇಂದ್ರ ಘಟಕದ ಜತೆಗೆ ನಿರಂತರ ಸಂಘರ್ಷದಿಂದಾಗಿ ರಾಜಧಾನಿಯಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಾರವಾಗಿಲ್ಲ.

16ನೇ ಜಿಲ್ಲಾ ಸಾಹಿತ್ಯ ಸಮ್ಮೇಳವು 2023ರ ಮಾರ್ಚ್‌ ತಿಂಗಳಲ್ಲಿ ವಸಂತನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದಿತ್ತು. ಲೇಖಕಿ ಎಚ್.ಎಸ್. ಶ್ರೀಮತಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಕಸಾಪ ಕೇಂದ್ರ ಘಟಕವು ಅಗತ್ಯ ಅನುದಾನ ನೀಡದಿರುವುದು ಹಾಗೂ ಕೋಶಾಧಿಕಾರಿ ನೇಮಕಾತಿ ರದ್ದುಪಡಿಸಿದ ಪರಿಣಾಮ, ಆ ಸಮ್ಮೇಳನದ ವೆಚ್ಚವನ್ನು ಪೂರ್ಣ ‍ಪ್ರಮಾಣದಲ್ಲಿ ಭರಿಸಲು ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಈವರೆಗೂ ಸಾಧ್ಯವಾಗಿಲ್ಲ.

ADVERTISEMENT

ಅನುದಾನ ಕಡಿತ: 15ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಮಾರ್ಚ್‌ ತಿಂಗಳಿನಲ್ಲಿ ಹೆಬ್ಬಾಳದಲ್ಲಿ ನಡೆಸಲಾಗಿತ್ತು. ಕೋವಿಡ್ ಕಾರಣ 2022ರಲ್ಲಿ ಸಮ್ಮೇಳನ ನಡೆದಿರಲಿಲ್ಲ. 16ನೇ ಸಾಹಿತ್ಯ ಸಮ್ಮೇಳನಕ್ಕೆ ಘಟಕವು ಸುಮಾರು ₹12 ಲಕ್ಷವನ್ನು ವೆಚ್ಚ ಮಾಡಿತ್ತು. ಈ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಸಾಪ ರಾಜ್ಯ ಘಟಕ ನೀಡಬೇಕಾಗಿದ್ದ ₹5 ಲಕ್ಷ ಅನುದಾನದಲ್ಲಿ, ₹4 ಲಕ್ಷ ಮಾತ್ರ ಬಿಡುಗಡೆ ಮಾಡಿತ್ತು. ಇದರಿಂದಾಗಿ ಸಮ್ಮೇಳನದ ಪೂರ್ಣ ವೆಚ್ಚ ಭರಿಸಲು ಸಾಧ್ಯವಾಗದೆ, ಸ್ಮರಣ ಸಂಚಿಕೆ, ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿಗಳು ಹಾಗೂ ಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಪೂರ್ಣ ಹಣ ಪಾವತಿಸಿಲ್ಲ. 

ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಮೊದಲಿನಿಂದಲೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತಲಾ ₹5 ಲಕ್ಷ ಅನುದಾನವನ್ನು ಸರ್ಕಾರಗಳು ಕಸಾಪ ರಾಜ್ಯ ಘಟಕದ ಮೂಲಕ ಒದಗಿಸುತ್ತಿವೆ. ಸಭಾಂಗಣಗಳ ಬಾಡಿಗೆ ಸೇರಿ ವಿವಿಧ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದರಿಂದ ಹೆಚ್ಚುವರಿ ಅನುದಾನವನ್ನು ಜಿಲ್ಲಾ ಘಟಕಗಳು ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಂಗ್ರಹಿಸುತ್ತಿವೆ. 16ನೇ ಬೆಂಗಳೂರು ನಗರ ಜಿಲ್ಲಾ ಸಮ್ಮೇಳನಕ್ಕೂ ಕೆಲ ದಾನಿಗಳಿಂದ ಅನುದಾನ ಸಂಗ್ರಹಿಸಲಾಗಿತ್ತು. ಇದರಿಂದಾಗಿ ಆರ್ಥಿಕ ಹೊರೆ ಸ್ವಲ್ಪಮಟ್ಟಿಗೆ ಇಳಿದಿತ್ತು. 

ಆರು ಘಟಕಗಳಲ್ಲಿ ಕನ್ನಡದ ಹಬ್ಬ

ಕಸಾಪ ಜಿಲ್ಲಾ ಘಟಕಗಳು ತಾಲ್ಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿವೆ. ಪ್ರತಿ ತಾಲ್ಲೂಕಿನಲ್ಲಿ ನಡೆಸುವ ಸಮ್ಮೇಳನಕ್ಕೆ ರಾಜ್ಯ ಘಟಕವು ತಲಾ ₹1 ಲಕ್ಷ ಅನುದಾನ ಒದಗಿಸುತ್ತಿತ್ತು. ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ವಿಧಾನಸಭೆ ಕ್ಷೇತ್ರವಾರು ಕಸಾಪ ಘಟಕಗಳು ಇವೆ. ರಾಜರಾಜೇಶ್ವರಿ ನಗರ ಆನೇಕಲ್ ಬ್ಯಾಟರಾಯನಪುರ ಯಶವಂತಪುರ ಗಾಂಧಿನಗರ ಹಾಗೂ ದಾಸರಹಳ್ಳಿ ಕಸಾಪ ಘಟಕಗಳಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತಲಾ ಒಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಈ ಸಮ್ಮೇಳನಗಳ ವೆಚ್ಚವನ್ನು ದಾನಿಗಳ ನೆರವಿನಿಂದಲೇ ಭರಿಸಲಾಗಿದೆ. 

‘ಇದೇ ತಿಂಗಳು ಸಮ್ಮೇಳನ’

‘17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಇದೇ ತಿಂಗಳು ನಡೆಸಲು ಮುಂದಾಗಿದ್ದೇವೆ. ಅನುದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕಸಾಪ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕೋಶಾಧಿಕಾರಿ ರದ್ದತಿಯನ್ನು ತೆರವುಗೊಳಿಸಿದ್ದು ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಕಳೆದ ಸಮ್ಮೇಳನವು ನಮಗೆ ಹೊರೆಯಾಗಿ ಪರಿಣಮಿಸಿತ್ತು. ನಮ್ಮ ಮೇಲಿನ ವಿಶ್ವಾಸ ಹಾಗೂ ಕನ್ನಡದ ಮೇಲಿನ ಪ್ರೀತಿಯಿಂದ ಬಾಕಿ ಹಣ ಪಾವತಿಸದಿದ್ದರೂ ಕೆಲವರು ಸುಮ್ಮನಿದ್ದಾರೆ’ ಎಂದು ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.