ADVERTISEMENT

ಕಣ್ವ ಸೊಸೈಟಿ ವಂಚನೆ: ಸಹಕಾರ ಇಲಾಖೆಗೆ ಪತ್ರ

ನ್ಯಾಯಾಂಗ ಬಂಧನದಲ್ಲಿ ‌ವ್ಯವಸ್ಥಾಪಕ ನಿರ್ದೇಶಕ * ಮತ್ತೆ 17 ಸದಸ್ಯರಿಂದ ದೂರು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 21:30 IST
Last Updated 2 ನವೆಂಬರ್ 2019, 21:30 IST
ನಂಜುಂಡಯ್ಯ
ನಂಜುಂಡಯ್ಯ   

ಬೆಂಗಳೂರು: ಕಣ್ವ ಸಮೂಹ ಸಂಸ್ಥೆಯ ಶ್ರೀ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಸೊಸೈಟಿ ಬಗ್ಗೆ ಮಾಹಿತಿ ಕೋರಿ ಸಹಕಾರ ಇಲಾಖೆಗೆ ಪತ್ರ ಬರೆದಿದ್ದಾರೆ.

ವಂಚನೆ ಸಂಬಂಧ ಸೊಸೈಟಿಯ ಮೂವರು ಸದಸ್ಯರು ನೀಡಿದ್ದ ದೂರಿನನ್ವಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸಂಸ್ಥಾಪಕ ಎನ್‌.ನಂಜುಂಡಯ್ಯ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಅದಾದ ನಂತರವೂ ಆರೋಪಿ ವಿರುದ್ಧ 17 ಸದಸ್ಯರು ದೂರು ನೀಡಿದ್ದಾರೆ.

‘ಸೊಸೈಟಿಯಿಂದ ಆಗಿರುವ ವಂಚನೆ ಬಗ್ಗೆ ದಾಖಲೆಗಳನ್ನು ಕಲೆ ಹಾಕುತ್ತಿದ್ದೇವೆ. ನಿಶ್ಚಿತ ಠೇವಣಿ ಇರಿಸಿದ್ದ ಸದಸ್ಯರಿಗೆ ಬಾಂಡ್‌ಗಳನ್ನು ನೀಡಲಾಗಿದೆ. ಅದರ ಸಮೇತ ಹಲವು ದಾಖಲೆಗಳನ್ನು ದೂರುದಾರರು ಕೊಟ್ಟಿದ್ದಾರೆ. ಅವುಗಳ ಪರಿ ಶೀಲನೆ ನಡೆಸಲಾಗು ತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಕಾನೂನಿನನ್ವಯ ಸೊಸೈಟಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ನಿಯಮ ಉಲ್ಲಂಘಿಸಿಲ್ಲವೆಂದು ನಿರ್ದೇಶಕರು ಹೇಳುತ್ತಿದ್ದಾರೆ.2005ರಲ್ಲಿ ಆರಂಭ ವಾಗಿರುವ ಸೊಸೈಟಿಗೆ ಸಂಬಂಧಿಸಿ ದಂತೆ ನೋಂದಣಿ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ನೀಡುವಂತೆಸಹಕಾರ ಇಲಾಖೆಗೆ ಪತ್ರ ಬರೆಯಲಾಗಿದೆ. ಅದಕ್ಕೆ ಇಲಾಖೆಯಿಂದ ಉತ್ತರ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ’ ಎಂದು ಅವರು ವಿವರಿಸಿದರು.

ಆರ್‌ಬಿಐ ಅಧಿಕಾರಿಗಳಿಗೂ ಪತ್ರ: ‘ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳ ಅನ್ವಯ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಈ ನಿಯಮವನ್ನು ಉಲ್ಲಂಘಿಸಲಾಗಿದೆಯೇ ಎಂಬುದನ್ನೂ ತಿಳಿಯಬೇಕಿದೆ. ಹೀಗಾಗಿ, ಶೀಘ್ರದಲ್ಲಿ ಆರ್‌ಬಿಐ ಅಧಿಕಾರಿಗಳಿಗೂ ಪತ್ರ ಬರೆಯಲಾಗುವುದು’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಐಎಂಎ ಕಂಪನಿ ವಂಚನೆ ಪ್ರಕರ ಣಕ್ಕೂ ಶ್ರೀ ಕಣ್ವ ಸೌಹಾರ್ದ ಕೋ–ಆಪ ರೇಟಿವ್ ಸೊಸೈಟಿ ಪ್ರಕರಣಕ್ಕೂ ತುಂಬಾ ವ್ಯತ್ಯಾಸವಿದೆ. ಈ ಪ್ರಕರಣ ಸಹಕಾರ ಇಲಾಖೆ ವ್ಯಾಪ್ತಿಗೆ ಬರಲಿದೆ. ಸೊಸೈಟಿ ಬಗ್ಗೆ ದಾಖಲೆಗಳು ಸಂಗ್ರಹಿಸಿ ಪರಿಶೀಲನೆ ನಡೆಸಿ ತನಿಖಾ ವರದಿ ಸಿದ್ಧಪಡಿಸಲಿದ್ದೇವೆ. ವಂಚನೆ ಕಂಡುಬಂದರೆ ಸಹಕಾರ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುವುದು. ಅವರೇನಾದರೂ ಪ್ರತ್ಯೇಕ ದೂರು ನೀಡಿದರೆ ದಾಖಲಿಸಿ ಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

10 ದಿನದ ಹಿಂದೆ ನೀಡಿದ್ದ ಚೆಕ್‌ ಬೌನ್ಸ್‌: ‘ದೂರುದಾರರಲ್ಲಿ ಒಬ್ಬ ರಾದ ಮಂಜುನಾಥನಗರದ ಗೋಪಾಲ್ ಎಂಬುವವರಿಗೆ 10 ದಿನಗಳ ಹಿಂದೆ ಸೊಸೈಟಿಯಿಂದ ಚೆಕ್‌ ನೀಡ ಲಾಗಿತ್ತು. ಸೊಸೈಟಿ ಖಾತೆಯಲ್ಲಿ ಹಣ ಇಲ್ಲದಿದ್ದರಿಂದ ಚೆಕ್ ಬೌನ್ಸ್ ಆಗಿದ್ದು, ಈ ಬಗ್ಗೆ ಗೋಪಾಲ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಕಸ್ಟಡಿ ಕೋರಿ ನ್ಯಾಯಾಲಯಕ್ಕೆ ಅರ್ಜಿ: ‘ಬಂಧಿತ ನಂಜುಂಡಯ್ಯ ಅವರನ್ನು ಶುಕ್ರವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಅಧಿಕಾರಿ ಹೇಳಿದರು.

‘ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು, ಸೊಸೈಟಿ ಅಧ್ಯಕ್ಷರು ಹಾಗೂ ಸಿಇಒ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ ‌’ ಎಂದರು.

‘ನೋಟು ರದ್ದತಿಯಿಂದ ಸಂಕಷ್ಟದಲ್ಲಿ ಸೊಸೈಟಿ’
‘ಸೊಸೈಟಿ ಸ್ಥಾಪನೆ ಆದಾಗಿನಿಂದ ಉತ್ತಮ ವಹಿವಾಟು ನಡೆಸಲಾಗಿದೆ. ಕೇಂದ್ರ ಸರ್ಕಾರ ನೋಟು ರದ್ದುಗೊಳಿಸಿದ ದಿನದಿಂದಲೇ ಸೊಸೈಟಿ ಸಂಕಷ್ಟಕ್ಕೆ ಸಿಲುಕಿತು. ಐಎಂಎ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಸದಸ್ಯರೆಲ್ಲರೂ ಹಣ ವಾಪಸ್ ನೀಡುವಂತೆ ಒತ್ತಡ ಹಾಕಲಾರಂಭಿಸಿದರು. ಇದರಿಂದ ಸೊಸೈಟಿ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತು’ ಎಂದು ಆರೋಪಿ ನಂಜುಂಡಯ್ಯ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

‘ಸದ್ಯ ಸೊಸೈಟಿ ಖಾತೆಯಲ್ಲಿ ಹಣವಿಲ್ಲ. ಮೂರು ತಿಂಗಳ ಕಾಲಾವಕಾಶ ನೀಡಿದರೆ ಎಲ್ಲರ ಹಣವನ್ನೂ ವಾಪಸು ನೀಡುತ್ತೇನೆ’ ಎಂದೂ ನಂಜುಂಡಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿವೇಶನದ ಸಾಲದ ಕಂತು ಪಾವತಿಸದ ಸದಸ್ಯರು
‘ಕಣ್ವ ಡೆವಲಪರ್ಸ್‌ ಅಡಿಯಲ್ಲಿ ದಾನೂಜಿನಗರದಲ್ಲಿ 300ಕ್ಕೂ ಹೆಚ್ಚು ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಸೊಸೈಟಿಯ ಸದಸ್ಯರಾಗಿದ್ದ ಸಂಸ್ಥೆಯ ಉದ್ಯೋಗಿಗಳಿಗೆ ಸಾಲ ನೀಡಿ ನಿವೇಶನ ಮಾರಾಟ ಮಾಡಲಾಗಿತ್ತು. ಆ ಪೈಕಿ ಹಲವು ಸದಸ್ಯರು ಸಾಲದ ಕಂತು ತುಂಬುತ್ತಿಲ್ಲ. ಈ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.