
ಬೆಂಗಳೂರು: ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರು ಬರೆದಿರುವ, ಕರಾವಳಿ ಕರ್ನಾಟಕದ ಮತೀಯ ಸಂಘರ್ಷದ ಕರಾಳ ಮುಖವನ್ನು ಅನಾವರಣಗೊಳಿಸುವ 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಫೆ.15ರ ಭಾನುವಾರದಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿದೆ.
'ಅಹರ್ನಿಶಿ ಪ್ರಕಾಶನ' ಪ್ರಕಟಿಸಿರುವ ಈ ಕೃತಿಯು 2015 ರಿಂದ 2025ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮತೀಯ ಸಂಘರ್ಷಗಳು ಹಾಗೂ ಪ್ರತಿಕಾರದ ದಾಳಿಗಳಿಗೆ ಬಲಿಯಾದ ಅಮಾಯಕ ಕುಟುಂಬಗಳ ಇಂದಿನ ದಾರುಣ ಸ್ಥಿತಿಗತಿಗಳನ್ನು ದಾಖಲಿಸಲಾಗಿದೆ. ದ್ವೇಷದ ರಾಜಕಾರಣವು ಸಾಮಾನ್ಯ ಕುಟುಂಬಗಳನ್ನು ಹೇಗೆ ಬೀದಿಗೆ ತರುತ್ತದೆ ಎಂಬ ಚಿತ್ರಣ ಈ ಪುಸ್ತಕದಲ್ಲಿದೆ.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಿನಿಮಾ ಮತ್ತು ರಂಗಭೂಮಿ ನಟ ಕಿಶೋರ್ ಕುಮಾರ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಭಾಗಿಯಾಗಲಿದ್ದಾರೆ.
ಈ ಪುಸ್ತಕದಲ್ಲಿ 2015ರಿಂದ 2025ರ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಪ್ರತೀಕಾರಕ್ಕೆ ಬಲಿಯಾದ ಅಮಾಯಕರ ಕುಟುಂಬಗಳ ನೋವು, ತಲ್ಲಣ, ಆತಂಕಗಳನ್ನು ತೆರೆದಿಡುವ ಪ್ರಯತ್ನ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.