ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾನುವಾರ ರಾತ್ರಿ ಜಟಾಪಟಿ ನಡೆದಿದ್ದು, ಈ ಸಂಬಂಧ ಮಡಿವಾಳ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ.
ಆರೋಪ–ಪ್ರತ್ಯಾರೋಪ ಮಾಡಿ ಎರಡೂ ಪಕ್ಷಗಳ ಕಾರ್ಯಕರ್ತರು, ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
‘ಹಲ್ಲೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತ ಎಂ.ವೈ. ಲೋಕೇಶ್ ಹಾಗೂ ಬಿಜೆಪಿ ಕಾರ್ಯಕರ್ತ ಹರಿನಾಥ್ ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಎರಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಿಜೆಪಿ ಪ್ರತಿಭಟನೆ: ‘ಪ್ರಚಾರಕ್ಕೆಂದು ಹೋಗಿದ್ದ ಕಾರ್ಯಕರ್ತ ಹರಿನಾಥ್ ಮೇಲೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಡಿವಾಳ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ಹಾಗೂ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ನೇತೃತ್ವದಲ್ಲಿ ಸೇರಿದ್ದ ಕಾರ್ಯಕರ್ತರು, ‘ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಅವರ ಮಗ ಲಿತೇಶ್ ಹಾಗೂ ಇತರರು ಗಲಾಟೆಗೆ ಕಾರಣ. ಅವರೆಲ್ಲರೂ ಸೇರಿ ಹರಿನಾಥ್ ಅವರಿಗೆ ಹೊಡೆದಿದ್ದಾರೆ’ ಎಂದು ಆರೋಪಿಸಿದರು.
ತೇಜಸ್ವಿ ಸೂರ್ಯ ಮಾತನಾಡಿ, ‘ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ, ಬಿಟಿಎಂ ಲೇಔಟ್ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗಂಭೀರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪ್ರತಿಭಟನೆ: ಮಡಿವಾಳ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ, ‘ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಹಲ್ಲೆ ಮಾಡಿಲ್ಲ. ಬಿಜೆಪಿಯ ಹರಿನಾಥ್ ಹಾಗೂ ಇತರರು ಮತದಾರರಿಗೆ ಹಣ ಹಂಚಲು ಹೊರಟಿದ್ದರು. ಅದನ್ನು ನೋಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಿಡಿಯಲು ಹೋಗಿದ್ದರು. ಹೆದರಿ ಪರಾರಿಯಾಗುವ ವೇಳೆ ಹರಿನಾಥ್ ಮಾರ್ಗಮಧ್ಯೆಯೇ ಬಿದ್ದು ಗಾಯಗೊಂಡಿದ್ದಾರೆ. ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ದೂರು ದಾಖಲಿಸಿದ್ದಾರೆ’ ಎಂದರು.
‘ಕ್ಷೇತ್ರದಲ್ಲಿ ಬಿಜೆಪಿ ದೌರ್ಜನ್ಯ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಹಣ, ಮದ್ಯ, ಸೀರೆ ಹಂಚುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.