
ಬೆಂಗಳೂರು: ಜನ್ಮಜಾತ ಅನಾರೋಗ್ಯ ಸಮಸ್ಯೆಗಳ ಪತ್ತೆಯ ಜತೆಗೆ, ವಿರಳ ಕಾಯಿಲೆಗಳಿಂದ ಸಂಭವಿಸುತ್ತಿರುವ ಮರಣ ತಡೆಯಲು ಆರೋಗ್ಯ ಇಲಾಖೆಯು ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ’ ರೂಪಿಸಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಲಿದೆ. ಈ ಸಂಬಂಧ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (ಐಜಿಐಸಿಎಚ್) ವಿವಿಧ ಸರ್ಕಾರಿ ಹೆರಿಗೆ ಆಸ್ಪತ್ರೆಗಳ ವೈದ್ಯರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಜನಿಸಿದ 48 ಗಂಟೆಯಿಂದ 72 ಗಂಟೆಯ ಒಳಗೆ ಶಿಶುಗಳ ರಕ್ತದ ಮಾದರಿಯನ್ನು ಪಡೆದು, ಪರೀಕ್ಷೆ ನಡೆಸಲು ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಆರಂಭಿಕ ಹಂತದಲ್ಲಿಯೇ ಸಮಸ್ಯೆ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ ಸಾಧ್ಯ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಎರಡೂ ಜಿಲ್ಲೆಗಳ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ವಾಣಿವಿಲಾಸ ಆಸ್ಪತ್ರೆಯನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಇಲ್ಲಿ ಜನ್ಮಜಾತ ಅನಾರೋಗ್ಯ ಸಮಸ್ಯೆ ಪತ್ತೆಗೆ ಪ್ರಯೋಗಾಲಯ ವ್ಯವಸ್ಥೆಯಿದೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆರಿಗೆಯಾಗುವ ಎಲ್ಲ ನವಜಾತ ಶಿಶುಗಳನ್ನು ರೋಗ ಪತ್ತೆ ತಪಾಸಣೆಗೆ ಒಳಪಡಿಸಲಾಗುತ್ತದೆ. ಸಮಸ್ಯೆಯ ಸಂದೇಹ ಇರುವ ಮಗುವಿನ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುತ್ತದೆ.
ಐದು ರೋಗ ಪತ್ತೆ: ಯೋಜನೆಯಡಿ ‘ಹೈಪೋಥೈರಾಯ್ಡಿಸಮ್’, ‘ಅಡ್ರಿನಲ್ ಹೈಪರ್ಪ್ಲಾಸಿಯಾ’ (ಸಿಎಎಚ್), ‘ಗ್ಯಾಲಕ್ಟೋಸೆಮಿಯಾ’, ‘ಫಿನೈಲ್ಕೆಟೋನೂರಿಯಾ’ ಮತ್ತು ‘ಗ್ಲೂಕೋಸ್-6 ಫಾಸ್ಪೇಟ್ ಡಿಹೈಡ್ರೋಜಿನೇಸ್’ (ಜಿ6ಪಿಡಿ) ಕೊರತೆ ಮತ್ತು ಚಯಾಪಚಯ ಅಸ್ವಸ್ಥತೆಗಳ ಪತ್ತೆಗೆ ತಪಾಸಣೆ ಮಾಡಲಾಗುತ್ತದೆ. ರೋಗ ನಿರ್ಣಯದ ಪರೀಕ್ಷೆಗೆ ತಲಾ ₹500 ನಿಗದಿಪಡಿಸಲಾಗಿದೆ. ರೋಗ ಗೊತ್ತುಪಡಿಸಿದ ಬಳಿಕ ಹಾರ್ಮೋನ್‌ಗಳ ಬದಲಾವಣೆ ಸೇರಿ ವಿವಿಧ ಚಿಕಿತ್ಸೆಗಳಿಗೆ ಒಳಪಡಿಸಲಾಗುತ್ತದೆ.
‘ಅಪಾಯದಲ್ಲಿರುವ ಶಿಶುಗಳನ್ನು ಗುರುತಿಸಿ, ಚಿಕಿತ್ಸೆ ಒದಗಿಸಲು ಈ ಯೋಜನೆ ಸಹಕಾರಿಯಾಗಲಿದೆ. ಈ ತಪಾಸಣೆ ಹಾಗೂ ಚಿಕಿತ್ಸೆಯಿಂದ ನವಜಾತ ಶಿಶುಗಳ ಮರಣ ಪ್ರಮಾಣವೂ ಇಳಿಕೆಯಾಗಲಿದೆ. ಆರಂಭಿಕ ಹಂತದಲ್ಲಿ ಸಮಸ್ಯೆ ಗುರುತಿಸದಿದ್ದರೆ ಚಿಕಿತ್ಸೆ ದುಬಾರಿಯಾಗುವ ಜತೆಗೆ, ಮಗು ಅಂಗವಿಕಲತೆಗೆ ಒಳಗಾಗುವ ಅಥವಾ ಮೃತಪಡುವ ಸಾಧ್ಯತೆ ಇರುತ್ತದೆ’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು.
ಜನ್ಮಜಾತ ಸಮಸ್ಯೆ ಪತ್ತೆಗೆ ಸಂಬಂಧಿಸಿ ವೈದ್ಯರಿಗೆ ತರಬೇತಿ ಒದಗಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಬಹುದುಡಾ. ಸಂಜಯ್ ಕೆ.ಎಸ್., ಐಜಿಐಸಿಎಚ್ ನಿರ್ದೇಶಕ
ಯೋಜನೆಯಡಿ ಪ್ರಾಯೋಗಕವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 57350 ನವಜಾತ ಶಿಶುಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುದಾನ ಒದಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ವ್ಯಾಪ್ತಿಗೆ ಒಳಪಡುವ ತುಮಕೂರು ಬಳ್ಳಾರಿ ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳ ತಾಲ್ಲೂಕುಗಳಲ್ಲಿನ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಈ ತಪಾಸಣೆ ನಡೆಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.