ADVERTISEMENT

ಬಾಲಬ್ರೂಯಿಯಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್: ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 9:34 IST
Last Updated 17 ಜನವರಿ 2023, 9:34 IST
ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹ
ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹ   

ಬೆಂಗಳೂರು: ಬಾಲಬ್ರೂಯಿ ಅತಿಥಿ ಗೃಹದಲ್ಲಿ "ಕಾನ್ಸ್ಟಿಟ್ಯೂಷನ್ ಕ್ಲಬ್" ಆರಂಭಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಮೆಟ್ರೊ ಕಾಮಗಾರಿಗಾಗಿ ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಪರಿಸರ ತಜ್ಞರೂ ಆದ ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ದತ್ತಾತ್ರೇಯ ಟಿ.ದೇವರೆ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ಕುರಿತ ಮಧ್ಯಂತರ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಅವರು, "ಪಾರಂಪರಿಕ ಕಟ್ಟಡದ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗದಂತೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು. ಅತಿಥಿ ಗೃಹದ ಆವರಣದಲ್ಲಿರುವ 159 ಮರಗಳನ್ನು ಕಡಿಯುವುದಿಲ್ಲ. ಕಟ್ಟಡಕ್ಕೆ ಧಕ್ಕೆಯಾಗುವ ಯಾವುದೇ ಕಾಮಗಾರಿ ನಡೆಸುವುದಿಲ್ಲ. ಅತಿಥಿ ಗೃಹ ನಿರ್ವಹಣೆಗೆ ಮಾತ್ರವೇ ಕ್ರಮ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ದೆಹಲಿಯಲ್ಲೂ ಇದೇ ಮಾದರಿಯ ಕ್ಲಬ್ ಇದೆಯಲ್ಲವೇ" ಎಂದು ಪ್ರಶ್ನಿಸಿತಲ್ಲದೇ, "ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಒಳ್ಳೆಯ ಗ್ರಂಥಾಲಯ, ಉತ್ತಮ ಕಾಫಿ ಸಿಗುವಂತಾಗಲಿ" ಎಂದು ಆಶಿಸಿ ಸರ್ಕಾರದ ಪ್ರಸ್ತಾವಕ್ಕೆ ಅನುಮತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.