ADVERTISEMENT

ರಾಜಕಾಲುವೆಗೆ ಸ್ಲ್ಯಾಬ್‌: ವರದಿಗೆ ಸೂಚನೆ

ತಜ್ಞರ ಅಭಿಪ್ರಾಯ ಪಡೆಯಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 19:43 IST
Last Updated 24 ಅಕ್ಟೋಬರ್ 2019, 19:43 IST
   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಾಜಕಾಲುವೆಗಳಿಗೆ ಸಿಮೆಂಟ್‌ ಸ್ಲ್ಯಾಬ್‌ ಹೊದಿಸಿ ಮುಚ್ಚುವುದು ಸಮಜಂಸ ಹೌದೊ ಅಲ್ಲವೊ ಎಂಬ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ನಿರ್ದೇಶಿಸಿದೆ.

ನಗರದ ಮೂಲಸೌಕರ್ಯಗಳ ಕೊರತೆ ಪ್ರಶ್ನಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ಅವರು, ‘ನಗರದ 842 ಕಿ.ಮೀ ಉದ್ದದ ರಾಜಕಾಲುವೆಗಳ ಪೈಕಿ ಈತನಕ ಒಟ್ಟು 403 ಕಿ.ಮೀ ಉದ್ದದಷ್ಟು ವ್ಯಾಪ್ತಿಯ ಇಬ್ಬದಿಯಲ್ಲಿ ಗೋಡೆ ನಿರ್ಮಿಸಲಾಗಿದೆ. ಇನ್ನೂ 438 ಕಿ.ಮೀ ನಷ್ಟು ಉದ್ದದ ಕಾಮಗಾರಿ ಬಾಕಿ ಇದೆ’ ಎಂದು ತಿಳಿಸಿದರು.

ADVERTISEMENT

‘77 ಕಿ.ಮೀ.ನಷ್ಟು ಉದ್ದದಲ್ಲಿ ರಾಜಕಾಲುವೆಗಳಿಗೆ ಸಿಮೆಂಟ್ ಸ್ಲ್ಯಾಬ್‌ಗಳನ್ನು ಹೊದಿಸಲಾಗಿದೆ. 230 ಕಿ.ಮೀ.ನಷ್ಟು ಉದ್ದಕ್ಕೆ ತಂತಿಬೇಲಿ ರಕ್ಷಣೆ ಮಾಡಲಾಗಿದೆ. 2020–21ರಲ್ಲಿ 103 ಕಿ.ಮೀನಷ್ಟು ಉದ್ದಕ್ಕೆ ಗೋಡೆ ನಿರ್ಮಿಸಲು ಬಜೆಟ್‌ನಲ್ಲಿ ಒಪ್ಪಿಗೆ ದೊರೆತಿದೆ. ಒಟ್ಟಾರೆ ಶೇ 50ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದರು.

ಇದೇ ವೇಳೆ ಪುಟ್ಟೇಗೌಡ, ಹರಿಯಾಣದಲ್ಲಿ ರಾಜಕಾಲುವೆಗಳನ್ನು ಸಿಮೆಂಟ್‌ ಹೊದಿಕೆಯಿಂದ ಮುಚ್ಚದಂತೆ ಹಸಿರು ನ್ಯಾಯಮಂಡಳಿ ಹೊರಡಿಸಿದ ಆದೇಶದ ಬಗ್ಗೆ ಪ್ರಸ್ತಾಪಿಸಿದರು. ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ ಎಂಬ ಅಂಶವನ್ನು ನ್ಯಾಯಪೀಠಕ್ಕೆ ವಿವರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದು ಹರಿಯಾಣಕ್ಕೆ ಸೀಮಿತವಾದದ್ದು. ಈ ಕುರಿತು ನಿಮಗೆ ಬಂದಿರುವ ಅಧಿಕೃತ ಮಾಹಿತಿಯನ್ನು ನ್ಯಾಯಪೀಠಕ್ಕೆ ಒದಗಿಸಿ. ಈ ಬಗ್ಗೆ ತಜ್ಞರ ವರದಿಯನ್ನು ನವೆಂಬರ್‌ 7ಕ್ಕೆ ಸಲ್ಲಿಸಿ’ ಎಂದು ವಿಚಾರಣೆ ಮುಂದೂಡಿತು.

ಪರಿಹಾರ: ‘2014ರಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಗೀತಾಲಕ್ಷ್ಮಿಗೆ ₹ 3 ಲಕ್ಷ ಪರಿಹಾರ ನೀಡಲಾಗಿದೆ’ ಎಂದೂ ಪುಟ್ಟೇಗೌಡ ನ್ಯಾಯಪೀಠಕ್ಕೆ ತಿಳಿಸಿದರು.

2014ರ ಅಕ್ಟೋಬರ್ ಮೊದಲ ವಾರದಲ್ಲಿ ಬನ್ನೇರುಘಟ್ಟದ ಬಿಳೇಕಹಳ್ಳಿ ಬಳಿ ಕಾಲುಜಾರಿ ರಾಜಕಾಲುವೆಗೆ ಬಿದ್ದಿದ್ದ 9 ವರ್ಷದ ಬಾಲಕಿ ಗೀತಾಲಕ್ಷ್ಮಿಯ ಶವ ಎರಡು ದಿನಗಳ ನಂತರ ಮಡಿವಾಳ ಕೆರೆಯ ಬಳಿ ಪತ್ತೆಯಾಗಿತ್ತು.

ಕೆಪಿಎಸ್‌ಸಿ: ವಿಚಾರಣೆ ಮುಂದಕ್ಕೆ

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಅರ್ಹ ಅಭ್ಯರ್ಥಿಗಳ ನೇಮಕ ಮಾಡಿ’ ಎಂದು ಹೈಕೋರ್ಟ್‌, 2016ರ ಜೂನ್‌ 21ರಂದು ನೀಡಿರುವ ಆದೇಶ ಪಾಲನೆ ಮಾಡದಿರುವ ಸರ್ಕಾರದ ಕ್ರಮ ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಎರಡು ವಾರ ಮುಂದೂಡಿದೆ.

ಈ ಕುರಿತಂತೆ ಬಿ.ಎಸ್.ಮಂಜುನಾಥ್‌ ಹಾಗೂ ಇತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯು ಗುರುವಾರ, ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸುತ್ತಿದೆ. ಮಾಹಿತಿ ಒದಗಿಸಲು ಒಂದಷ್ಟು ಕಾಲಾವಕಾಶ ಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. 1998, 1999 ಹಾಗೂ 2004ರ ಸಾಲಿನ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.