ADVERTISEMENT

ವೈದ್ಯಕೀಯ ಕೋರ್ಸ್‌ಗೆ ಮಾತ್ರ ಮುಂಗಡ ಪಾವತಿ: ಎಚ್.ಪ್ರಸನ್ನ

2ನೇ ಸುತ್ತಿನ ಸೀಟು ಹಂಚಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 16:20 IST
Last Updated 21 ಆಗಸ್ಟ್ 2025, 16:20 IST
   

ಬೆಂಗಳೂರು: ಮೊದಲ ಸುತ್ತಿನಲ್ಲಿ ವೈದ್ಯಕೀಯ ಸೀಟು ಸಿಗದವರು ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲ ವರ್ಗದ ಅಭ್ಯರ್ಥಿಗಳು ₹1 ಲಕ್ಷ ಮುಂಗಡ ಹಣ ಪಾವತಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಛಾಯ್ಸ್-3 ಆಯ್ಕೆ ಮಾಡಿಕೊಂಡಿರುವ ಹಾಗೂ‌ ಮೊದಲ ಸುತ್ತಿನಲ್ಲಿ ಆಯ್ಕೆ ದಾಖಲಿಸಿದ ನಂತರವೂ ಸೀಟು ಹಂಚಿಕೆ ಆಗದಿದ್ದರೆ ಮುಂಗಡ ಹಣ ಪಾವತಿಸುವುದು ಕಡ್ಡಾಯ. ಅಂತಹವರಿಗೆ 2ನೇ ಸುತ್ತಿಗೆ ಆಯ್ಕೆ ಬದಲಿಸಿಕೊಳ್ಳಲು ಅಥವಾ ತೆಗೆದು ಹಾಕಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 25ರೊಳಗೆ ಮುಂಗಡ ಹಣ ಪಾವತಿಸಿ, ಆಯ್ಕೆ ಅದಲು, ಬದಲು ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪಥಿ, ಯುನಾನಿ ಹಾಗೂ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ನರ್ಸಿಂಗ್ ಇತ್ಯಾದಿ ಕೋರ್ಸ್‌ಗಳಿಗೆ ಮುಂಗಡ ಹಣ ಪಾವತಿಸುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಹಂಚಿಕೆಯಾದ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಸೀಟಿಗೆ ಛಾಯ್ಸ್-2 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕೂಡ ಎರಡನೇ ಸುತ್ತಿನಲ್ಲಿ ಮುಂಗಡ ಹಣ ಪಾವತಿಸುವ ಅಗತ್ಯ ಇಲ್ಲ ಎಂದೂ ಅವರು ವಿವರಿಸಿದ್ದಾರೆ.

ಎರಡನೇ ಸುತ್ತಿನ ಸೀಟು ಹಂಚಿಕೆಯಾದರೆ ಅಭ್ಯರ್ಥಿ ಪಾವತಿಸಿರುವ ಮುಂಗಡ ಹಣವನ್ನು ಕಾಲೇಜು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ವೈದ್ಯಕೀಯ ಸೀಟು ಹಂಚಿಕೆಯಾಗಿ, ಉಳಿದ ಶುಲ್ಕ ಪಾವತಿಸಲು ಅಥವಾ ಕಾಲೇಜಿಗೆ ಪ್ರವೇಶ ಪಡೆಯಲು ವಿಫಲವಾದರೂ ಅಂತಹ ಅಭ್ಯರ್ಥಿಗಳ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ ನೋಡಿ ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.